ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳು ನಿತ್ಯನೂತನವಾಗಿ, ನಿರಂತರವಾಗಿ, ಕ್ರಿಯಾಶೀಲವಾಗಿ ನಡೆಯಲೆಂದು ಶಿಡ್ಲಘಟ್ಟ ತಾಲ್ಲೂಕಿಗೆ ನೂತನ ಕಸಾಪ ಅಧ್ಯಕ್ಷರನ್ನಾಗಿ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್ ಅವರನ್ನು ಆಯ್ಕೆ ಮಾಡಿರುವುದಾಗಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ತಿಳಿಸಿದರು.
ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರ ಮಠದಲ್ಲಿ ಶುಕ್ರವಾರ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್ ಅವರಿಗೆ ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ನೇಮಕಾತಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಕಸಾಪ ತಾಲ್ಲೂಕಿನ ಮೂಲೆ ಮೂಲೆಗೂ ಹರಡಬೇಕು. ತ್ಯಾಗರಾಜ್ ಅವರ ಕನ್ನಡ ತುಡಿತವನ್ನು ಪುರಸ್ಕರಿಸಿ ರಾಜ್ಯ ಹಾಗೂ ಜಿಲ್ಲಾ ಕಸಾಪ ಕಾಲಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ವಯ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿ 2018 ರ ಆಗಸ್ಟ್ 17 ರಿಂದ ಅನ್ವಯವಾಗುವಂತೆ ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ನೇಮಿಸಿದ್ದೇನೆ. ಮನೆಯಂಗಳದಲ್ಲಿ ಮತ್ತು ಶಾಲೆಯಂಗಳದಲ್ಲಿ ನುಡಿಸಿರಿ, ವನಸಿರಿ, ಕಸಾಪ ನಡಿಗೆ ಸಾಧಕರ ಕಡೆಗೆ ಎಂಬ ನಾಲ್ಕು ಕಾರ್ಯಕ್ರಮಗಳನ್ನು ವಾರಕ್ಕೊಂದರಂತೆ ಮಾಡಬೇಕು. ಗ್ರಾಮೀಣ ಭಾಗದವರನ್ನು ಆಯ್ಕೆ ಮಾಡುವ ಮೂಲಕ ಕಸಾಪ ನಗರಕ್ಕೆ ಸೀಮಿತವಾಗಿಲ್ಲ ಎಂಬ ಸಂದೇಶವನ್ನು ಸಹ ಈ ಮೂಲಕ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ನೂತನ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.
ಕಸಾಪ ಜಿಲ್ಲಾ ಕೋಶಾಧಿಕಾರಿ ನಂಜುಂಡಪ್ಪ, ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ಶಂಕರ್, ಸತೀಶ್, ಮೂರ್ತಿ, ವಿಜಯಲಕ್ಷ್ಮಿ ಹಾಜರಿದ್ದರು.
- Advertisement -
- Advertisement -
- Advertisement -