ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ತಾಲ್ಲೂಕು, ಹೋಬಳಿ ಕಸಾಪ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ‘ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ವಿಷಯವಾಗಿ ಪತ್ರಕರ್ತ ಬಿ.ಗಣಪತಿ ಮಾತನಾಡಿದರು.
ಸಾಹಿತ್ಯದ ಹರಿವಿನಿಂದ ಬಂದದ್ದೇ ಜಾತ್ಯತೀತ ಪ್ರಜ್ಞೆ. ಸಾಹಿತ್ಯದ ಮೂಲ ಧೋರಣೆ ಮನುಷ್ಯನನ್ನು ಮನುಷ್ಯನನ್ನಾಗಿಸುವುದಾಗಿದೆ. ನಮ್ಮನ್ನು ನಾವು ಕಂಡುಕೊಳ್ಳುವುದೇ ಸಾಹಿತ್ಯದ ಮುಖ್ಯ ಆಶಯ ಎಂದು ಅವರು ತಿಳಿಸಿದರು.
ಮನುಷ್ಯ ಸಮಾಜವನ್ನು ಒಟ್ಟಾಗಿ ಕಟ್ಟುವ ಸಮಷ್ಟಿಯ ಭಾವನೆಯ ಕುವೆಂಪುರವರ ಆಶಯವು ಸಾಹಿತ್ಯದ ಧೋರಣೆಯನ್ನು ಪ್ರತಿಧ್ವನಿಸುತ್ತದೆ. ಕುವೆಂಪುರವರು ನಾಡಿನ ಪ್ರಜ್ಞೆಯಾದರೆ, ಡಾ.ರಾಜ್‌ಕುಮಾರ್ ಸಾಂಸ್ಕೃತಿಯ ಧ್ವನಿಯಾಗಿದ್ದರು. ಬಿರುಸಾಗಿದ್ದ ಚಳುವಳಿಗಳು ನಿರಸನಗೊಂಡದ್ದಕ್ಕೆ ಸಾಹಿತ್ಯದ ಮೌಲ್ಯದ ಅಧಃಪತನವೇ ಕಾರಣ. ಕನ್ನಡದಿಂದ ನಾವು ಬದುಕಲು ಕಲಿತಿದ್ದೇವೆ, ಆದರೆ ಕನ್ನಡವನ್ನು ಬದುಕಿಸಲು ಕಲಿಯದಿರುವುದು ದುರಂತ. ವಿಧಾನಸೌಧದ ಮೆಟ್ಟಿಲು ತುಳಿದೊಡನೆಯೇ ಸಾಹಿತ್ಯದ ಮೌಲ್ಯ ಕುಸಿಯಿತು.
ಹಿಂದೆ ಸಾಹಿತ್ಯ ಬಡವರ, ದಲಿತರ, ಶೋಷಿತರ, ಕೃಷಿಕರ ಆತ್ಮಾಭಿಮಾನದ ಸಂಕೇತವಾಗಿತ್ತು. ಸಾಹಿತ್ಯ ಯಾವತ್ತಿಗೂ ಸಮಾಜದಿಂದ ಹೊರತಲ್ಲ. ಸಾಹಿತ್ಯ ಸಹಜ ಜೀವನಪ್ರಜ್ಞೆಯ ಪ್ರತಿಬಿಂಬ, ಮನೋವಿಕಾಸವೇ ಇದರ ಮೂಲ ಉದ್ದೇಶ. ಓದು, ಪರ್ಯಟನೆ, ಗುರು ಮತ್ತು ಸ್ವಅಧ್ಯಯನದಿಂದ ಮಾತ್ರ ವ್ಯಕ್ತಿ ಮತ್ತು ಸಮಾಜ ಬೆಳೆಯಬಲ್ಲದು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಸಾಪ ತೆಲುಗನ್ನಡಿಗರ ಪ್ರದೇಶದಲ್ಲಿ ಕನ್ನಡದ ಪ್ರೇಮ ಬಿತ್ತಲಿ. ತಾಲ್ಲೂಕಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಲಿ, ಎಲ್ಲರನ್ನೂ ಮುಟ್ಟುವಂತಾಗಲಿ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ತಿಂಗಳಿಗೆ ನಾಲ್ಕು ಕಾರ್ಯಕ್ರಮಗಳನ್ನು ಪ್ರತಿಯೊಂದು ತಾಲ್ಲೂಕಿನವರೂ ಮಾಡಿದಲ್ಲಿ ಜಿಲ್ಲೆಯಾಧ್ಯಂತ ಪ್ರತಿದಿನ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಗ್ರಾಮೀಣ ಭಾಗದಲ್ಲಿ ತಾಲ್ಲೂಕು ಅಧ್ಯಕ್ಷರು ಹೆಚ್ಚೆಚ್ಚು ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಕಸಾಪಗೆ ಕೀರ್ತಿ ತರಬೇಕೆಂದು ಹೇಳಿದರು.
ನೂತನ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಕಸಾಪ ಹಾಗೂ ಕನ್ನಡ ಧ್ವಜವನ್ನು ನೀಡಿ ಸನ್ಮಾನಿಸಿದರು. ತಾಲ್ಲೂಕು, ಹೋಬಳಿ ಕಸಾಪ ಘಟಕಗಳ ನೂತನ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರವನ್ನು ನೀಡಲಾಯಿತು.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರೇಗೌಡ, ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯ ಸಂಸ್ಥಾಪಕ ಎನ್.ದೇವರಾಜ್, ಎಸ್.ವಿ.ನಾಗರಾಜರಾವ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಸಂಚಾಲಕ ಜೆ.ಎಸ್.ವೆಂಕಟಸ್ವಾಮಿ, ಎಸ್.ಸತೀಶ್, ಚಾಂದ್‌ಪಾಷ, ಮುನಿಯಪ್ಪ, ದಾಕ್ಷಾಯಿಣಿ, ಶಂಕರ್, ಬಿ.ಆರ್.ಪ್ರಭಾಕರರೆಡ್ಡಿ, ಸಿ.ಎಂ.ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -