ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ತಾಲ್ಲೂಕಿನಾಧ್ಯಂತ ನಡೆಯುವ ಯಾವುದೇ ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ನೇರವಾಗಿ ಪಿಡಬ್ಲ್ಯೂಡಿ ಇಲಾಖೆಯ ಎಇಇ ರನ್ನೇ ಗುರಿ ಮಾಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕ್ಷೇತ್ರದಾಧ್ಯಂತ ಲೋಕೋಪಯೋಗಿ ಇಲಾಖೆಯ ಟೆಂಡರ್‌ಗಳನ್ನು ಶೇ ೨೫ ಕ್ಕಿಂತಲೂ ಕಡಿಮೆಗೆ ಪಡೆದಿರುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುತ್ತಾರೆಯೇ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಇಲಾಖೆಯಿಂದ ನಡೆಯುವ ಕಾಮಗಾರಿಯ ಬಗ್ಗೆ ಆಯಾ ಕ್ಷೇತ್ರದ ಸದಸ್ಯರಿಗೆ ಮಾಹಿತಿ ನೀಡಬೇಕು. ಕಾಮಗಾರಿ ನಡೆಯುವ ವೇಳೆ ಅಧಿಕಾರಿಗಳು ಖುದ್ದಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ನಡೆಸಬೇಕು. ಗುಣಮಟ್ಟದಲ್ಲಿ ಯಾವುದೇ ಲೋಪ ದೋಷಗಳಿರುವ ಬಗ್ಗೆ ಸದಸ್ಯರಿಂದ ದೂರುಗಳು ಬಂದಲ್ಲಿ ನೇರವಾಗಿ ಲೋಕೋಪಯೋಗಿ ಇಲಾಖೆಯ ಎಇಇ ರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ಮಾತನಾಡಿ, ತಾವು ಇಲಾಖೆಯಿಂದ ಕೈಗೊಳ್ಳುವ ಕಾಮಗಾರಿಗೆ ಮುನ್ನ ಆಯಾ ಗ್ರಾಮ ಪಂಚಾಯಿತಿಯಿಂದ ಎನ್.ಓ.ಸಿ ಪಡೆದು ನಂತರ ಕಾಮಗಾರಿ ಶುರುಮಾಡಿ. ಆಯಾ ಕ್ಷೇತ್ರದ ಜನಪ್ರತಿನಿಧಿಗಳಿಗೆ ಕಾಮಗಾರಿ ನಡೆಯುವ ಬಗ್ಗೆ ಮೊದಲೇ ಮಾಹಿತಿ ನೀಡಿ ಎಂದು ಪಿಡಬ್ಲ್ಯೂಡಿ ಜೆಇ ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರದಾದ್ಯಂತ ನೀರಿನ ಸಮಸ್ಯೆಯಿರುವ ಶಾಲೆಗಳ ಪಟ್ಟಿ ತಯಾರಿಸಿ ಕೂಡಲೇ ಕಚೇರಿಗೆ ಸಲ್ಲಿಸಿದಲ್ಲಿ ನೀರು ಪೂರೈಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಅಡುಗೆ ದಾಸ್ತಾನು ಕೊಠಡಿ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಡಿ ಅವಕಾಶವಿದ್ದು ಆಯಾ ಕ್ಷೇತ್ರದ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಶೀಘ್ರ ಕ್ರಮ ಜರುಗಿಸಲಾಗುವುದು ಎಂದರು.
ಕೃಷಿ ಇಲಾಖೆಯ ಅವ್ಯವಸ್ಥೆಗಳ ಬಗ್ಗೆ ಹಿಂದಿನ ಸಭೆಯಲ್ಲಿ ಸದಸ್ಯರು ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಮುಂದಿನ ಮೂರು ದಿನಗಳ ಒಳಗೆ ಅಗತ್ಯ ದಾಖಲೆಗಳನ್ನು ಕಚೇರಿಗೆ ನೀಡುವಂತೆ ಕೃಷಿ ಸಹಾಯಕ ನಿರ್ದೇಶಕ ಮಾಲತೇಶ್ ಅವರಿಗೆ ಅಧ್ಯಕ್ಷರು ಸೂಚಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅಂತರ್ಜಾತೀಯ ವಿವಾಹವಾಗಿದ್ದ ಕಾಚಹಳ್ಳಿಯ ಮುನಿರಾಜು ಹಾಗೂ ಎಸ್ ದೇವಗಾನಹಳ್ಳಿಯ ಸುಬ್ರಮಣಿ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿದ್ದಂತಹ ಸಹಾಯಧನದ ಚೆಕ್ ಅನ್ನು ವಿತರಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ, ಇಓ ಬಿ.ಶಿವಕುಮಾರ್, ಮೇಲ್ವಿಚಾರಕ ಪ್ರಸಾದ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -