ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ವರ್ಶ್ ಕುಷ್ಠ ಅರಿವು ಆಂದೋಳನ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿದರು.
ಹಿಂದೆ ಕುಷ್ಠ ಪೀಡಿತರನ್ನು ಕೇವಲವಾಗಿ ಕಾಣಲಾಗುತ್ತಿತ್ತಲ್ಲದೆ, ದೂರ ಇರಿಸಲಾಗುತ್ತಿತ್ತು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಜನರಲ್ಲಿ ಅರಿವು ಮೂಡಿದೆಯಾದರೂ, ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಕುಷ್ಠ ರೋಗಾಣುವಿನಿಂದ ಹರಡುವ ಕಾಯಿಲೆ. ಪ್ರಾರಂಭದಲ್ಲೆ ಚಿಕಿತ್ಸೆ ಪಡೆದರೆ, ಇದನ್ನು ಗುಣಪಡಿಸಬಹುದಾಗಿದೆ. ಅಂಗವಿಕಲರಾಗುವುದನ್ನು ತಪ್ಪಿಸಬಹುದಾಗಿದೆ. ಕುಷ್ಠ ರೋಗ ಆವರಿಸಿದವರಿಗೆ ಬಹು ಔಷಧ ಚಿಕಿತ್ಸೆ ಮೂಲಕ ಗುಣಪಡಿಸಲು ಅವಕಾಶವಿದೆ. ಜತೆಗೆ, ಅಂಗವಿಕಲರಾದರೆ ಪುನಃಶ್ಚೇನಗೊಳಿಸಲು ಅವಕಾಶವಿದೆ. ಈ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ ಅವರು, ಮೈಮೇಲೆ ಮಚ್ಚೆ ಕಂಡುಬಂದ ಕೂಡಲೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಸಾರ್ವಜನಿಕರಲ್ಲಿ ಕುಷ್ಟರೋಗದ ಬಗ್ಗೆ ಇರುವ ಮೂಡನಂಬಿಕೆಯನ್ನು ತೊಲಗಿರುವ ಉದ್ದೇಶದಿಂದ ಜನವರಿ ೩೦ ರಿಂದ ಫೆಬ್ರುವರಿ ೧೩ ರವರೆಗೆ ತಾಲ್ಲೂಕಿನೆಲ್ಲೆಡೆ ಸ್ವರ್ಶ್ ಕುಷ್ಠ ಅರಿವು ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ತಾಲ್ಲೂಕಿನ ಎಲ್ಲಾ ಗ್ರಾಮಗಳೂ ಹಾಗೂ ನಗರವನ್ನು ಆಶಾ ಕಾರ್ಯಕರ್ತೆಯರು ಸರ್ವೆ ನಡೆಸಿದ್ದಾರೆ. ೧೧ ಕುಷ್ಠರೋಗ ಚಿಹ್ನೆ ಇರುವವರು ಪತ್ತೆಯಾಗಿದ್ದಾರೆ. ರೋಗವನ್ನು ಗುಣಪಡಿಸುವ ಬಹುಔಷಧಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತದೆ. ಚಿಕಿತ್ಸೆ ಅವಧಿ ಕೇವಲ ೬ ತಿಂಗಳು ಅಥವಾ ೧೨ ತಿಂಗಳು. ರೋಗದ ಲಕ್ಷಣದ ಅನುಗುಣವಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದ್ದು, ಪ್ರಾರಂಬಿಕ ಹಂತದಲ್ಲಿ ಗುರ್ತಿಸಿ ಕ್ರಮ ಬದ್ದ ಚಿಕಿತ್ಸೆ ಪಡೆದಲ್ಲಿ ಅಂಗವಿಕಲತೆ ತಡೆಗಟ್ಟಬಹುದು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷ ಅಫ್ಸರ್ ಪಾಷಾ ಮಾತನಾಡಿ, ಕುಷ್ಠ ಮುಕ್ತ ಭಾರತ ಮಹಾತ್ಮಾ ಗಾಂದೀಜಿಯರವರ ಕನಸಾಗಿದ್ದು, ಎಲ್ಲರೂ ಸೇರಿ ಗಾಂಧೀಜಿಯವರ ಕನಸನ್ನು ನನಸು ಮಾಡೋಣ. ರೋಗ ಮುಕ್ತ ಸಮಾಜಕ್ಕೆ ಎಲ್ಲರೂ ಸಹಕರಿಸಿ ಎಂದು ಹೇಳಿದರು.
ಸ್ವರ್ಶ್ ಕುಷ್ಠ ಅರಿವು ಆಂದೋಳನ ಕಾರ್ಯಕ್ರಮದಲ್ಲಿ ಕುಷ್ಠ ರೋಗದ ವಿರುದ್ಧ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು ಮತ್ತು ಆಸ್ಪತ್ರೆಯ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಡಾ.ವಿಜಯ್, ಹಿರಿಯ ಆರೋಗ್ಯ ಸಹಾಯಕಿ ಮುನಿಲಕ್ಷಮ್ಮ, ಆಸ್ಪತ್ರೆಯ ಸಿಬ್ಬಂದಿ ವಿಜಯ, ಲೋಕೇಶ್ ಹಾಜರಿದ್ದರು.
- Advertisement -
- Advertisement -
- Advertisement -