ಕರೋನಾ ವೈರಸ್ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಎಷ್ಟು ಇದೆ ಎಂಬುದನ್ನ ನಿಖರವಾಗಿ ತೋರಿಸುವ ಭೂಪಟವನ್ನು ತೋರಿಸುವ ತಂತ್ರಜ್ಞಾನವನ್ನು ಹೇಗೆ ತ್ವರಿತವಾಗಿ ಅಭಿವೃದ್ಧಿ ಪಡಿಸಿದ್ದರೋ ಅದೇ ರೀತಿಯಾಗಿ ಕೃಷಿ ಪೂರಕವಾಗಿಯೂ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಭಕ್ತರಹಳ್ಳಿ ಅಂಬರೀಷ್.
ಯಾವ ಯಾವ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಯಾವ ಯಾವ ಬೆಳೆ ಕಟಾವಿಗೆ ಸಿದ್ದವಿದೆ. ಆ ಜಾಗದ ರೈತನ ದೂರವಾಣಿ ಸಂಖ್ಯೆ ಸಮೇತ ಮ್ಯಾಪ್ ನಲ್ಲಿ ತೋರುವಂತಾದರೆ ಸುತ್ತಮುತ್ತಲ ನಗರ ಪ್ರದೇಶದ ಗ್ರಾಹಕರು ನೇರವಾಗಿ ರೈತರನ್ನು ಸಂಪರ್ಕಿಸಿ ತಮಗೆ ಅಗತ್ಯವಾದಷ್ಟು ಹಣ್ಣು ತರಕಾರಿಗಳನ್ನ ಪಡೆಯಲು ಅನುಕೂಲವಾಗುತ್ತದೆ.
ಇನ್ನು ಸಾಗಣೆ ವಿಚಾರಕ್ಕೆ ಬಂದರೆ,ಹೇಗೂ ಓಲಾ ಅಥವಾ ಉಬರ್ ಸಂಸ್ಥೆಗಳು ಸಾಗಾಣಿಕಾ ವಾಹನಗಳ ಆಪ್ ಅಭಿವೃದ್ಧಿ ಪಡಿಸಿವೆ. ಅಥವಾ ಸ್ವಿಗ್ಗಿ ಸಂಸ್ಥೆ ಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಡೆಲಿವರಿ ಮಾಡುವವರನ್ನ ನೇಮಿಸಿಕೊಂಡರೆ ಅನುಕೂಲ. ರೈತರ ಉತ್ಪನ್ನಕ್ಕೆ ಸಾಗಣೆ ಸುಲಭ.
ಇದರಿಂದ ಗ್ರಾಮೀಣ ಪ್ರದೇಶದ ಅನೇಕ ಯುವಕರಿಗೆ ಉದ್ಯೋಗ ಸಿಗುತ್ತದೆ. ಟ್ರಕ್ ವಾಹನ ಹೊಂದಿದವರಿಗೆ ಸ್ವಾವಲಂಬಿ ಹಣ ಸಂಪಾದನೆಗೆ ದಾರಿ ಸಿಕ್ಕಂತಾಗುತ್ತದೆ.
ಇಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣು ತರಕಾರಿಯನ್ನು ಮಾತ್ರ ತಲುಪಿಸಲು ರೈತರು ಗ್ರೇಡಿಂಗ್ ಮಾಡುವುದು ಕಡ್ಡಾಯ. ಒಂದು ಬಾರಿ ಗ್ರಾಹಕರಿಗೆ ಗುಣಮಟ್ಟದ ಬಗ್ಗೆ ನಂಬಿಕೆ ಬಂದರೆ ಮುಂದೆಯೂ ಹೀಗೆ ಬೇಡಿಕೆ ಹೆಚ್ಚುತ್ತೆ. ರೈತರು ಕೇವಲ ಒಂದೆ ಬೆಳೆ ಬೆಳೆಸುವ ಬದಲಿಗೆ ವರ್ಷ ಪೂರ್ತಿ ನಿರಂತರ ಸರಬರಾಜು ಮಾಡಲು ಆಯಾ ಕಾಲಕ್ಕೆ ಸೂಕ್ತ ವಿವಿಧ ತರಕಾರಿಗಳನ್ನ ಬೆಳೆಯುವಂತೆ ಯೋಜನೆ ರೂಪಿಸಿಕೊಳ್ಳಲು ಇಲಾಖೆಗಳ ಅಧಿಕಾರಿಗಳು ಸಲಹೆ ಸೂಚನೆ ನೀಡಬೇಕು.
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೊಬ್ಬ ಅಥವಾ ಇಬ್ಬರನ್ನು ಮಾಹಿತಿ ಪೂರೈಕೆದಾರರಾಗಿ ನೇಮಿಸಿ. ಅವರಲ್ಲಿರುವ ಮೊಬೈಲ್ ನೆಟ್ ವರ್ಕ್ ಬಳಸಿ ದಿನಕ್ಕೊಮ್ಮೆ ಮಾಹಿತಿ ಸಂಗ್ರಹಿಸಿ ತಂತ್ರಾಂಶಕ್ಕೆ ಸೇರಿಸುವುದು. ಹಳ್ಳಿಗಳಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳು ಅಂದರೆ ಆ ದಿನ ಕೈಗೊಂಡ ಬಿತ್ತನೆ, ಬೆಳೆಯ ಹಂತ ಅಥವಾ ಆ ದಿನ ಕಟಾವಾಗಬಹುದಾದ ಅಂದಾಜು ಉತ್ಪನ್ನದ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಇದರಿಂದ ಹಳ್ಳಿಗಳಲ್ಲಿ ಅರೆಕಾಲಿಕ ಅಥವಾ ಪೂರ್ಣಾವಧಿ ಉದ್ಯೋಗ ಲಭಿಸುತ್ತೆ.
ಮಾರುಕಟ್ಟೆ ತಜ್ಞರು ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸಿ ಬೆಲೆ ನಿಗಧಿ ಮಾಡಲು ನೆರವಾಗಬೇಕು. ಒಮ್ಮೆ ಈ ವ್ಯವಸ್ಥೆ ಚಾಲ್ತಿಯಾದರೆ ಬಹುಶಃ ರೈತರಿಗೆ ಮಾರುಕಟ್ಟೆ ಸಮಸ್ಯೆ ನೀಗಿಸುವಲ್ಲಿ ನೆರವಾಗಲಿದೆ. ದಲ್ಲಾಳಿ ವ್ಯವಸ್ಥೆಯನ್ನು ಅಲ್ಪ ಮಟ್ಟಿಗೆ ಕಡಿಮೆಗೊಳಸಬಹುದು.
ಒಟ್ಟಾರೆ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಉತ್ಪನ್ನ ಲಭ್ಯವಾಗುತ್ತದೆ. ಇದು ಕಷ್ಟದಾಯಕವಾದ ಕೆಲಸವಲ್ಲ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -