ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬುಧವಾರ ಪೌರಪ್ರಜ್ಞೆ ಜಾಗೃತಿಗಾಗಿ ವಿದ್ಯಾರ್ಥಿ ಸಂಘಗಳ ರಚನೆ ಹಾಗೂ ಗ್ರಾಮ ನೈರ್ಮಲ್ಯ ಮತ್ತು ಹಸಿರು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಪರಿಸರವಾದಿ ಹಾಗೂ ಲೋಕ ಅದಾಲತ್ ಸದಸ್ಯ ಡಾ. ಅ. ನ.ಯಲ್ಲಪ್ಪ ರೆಡ್ಡಿ ಚಾಲನೆ ನೀಡಿದರು.
ಪೌರ ಪ್ರಜ್ಞೆಗಾಗಿ ಮಕ್ಕಳ ಚಳುವಳಿ (ಸಿಎಮ್ಸಿಎ) ಮತ್ತು ‘ನಮ್ಮ ಮುತ್ತೂರು’ ಸಂಸ್ಥೆಯ ವತಿಯಿಂದ ಮೇಲೂರು, ಮುತ್ತೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು ಮಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ನೈರ್ಮಲ್ಯ ಕಾರ್ಯಕ್ರಮವನ್ನು ನಡೆಸಿ, ಬಳುವನಹಳ್ಳಿಯ ಶ್ರೀ ಸೀತಾರಾಮ ವಿದ್ಯಾಚಂದ್ರ ಸಂಸ್ಥೆಯ ವತಿಯಿಂದ ಹಸಿರು ಅಭಿಯಾನವನ್ನು (ಸಸ್ಯಗಳನ್ನು ನೆಡುವ ಕಾರ್ಯಕ್ರಮ) ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮದಲ್ಲಿ ೩ ಸರ್ಕಾರಿ ಶಾಲೆಗಳಿಂದ ಸುಮಾರು ೧೫೦ ಸಿ.ಎಂ.ಸಿ.ಎ ಪೌರಕ್ಲಬ್ ಸದಸ್ಯರು ಮತ್ತು ಇತರೆ ೬೦ ಸದಸ್ಯರು ಗ್ರಾಮ ನೈರ್ಮಲ್ಯದ ಬಗ್ಗೆ ಅರಿವನ್ನು ಮೂಡಿಸಲು ಗ್ರಾಮದಲ್ಲಿ ಜಾಥ ನಡೆಸಿದರು. ಸುಮಾರು ೬೦೦ ಸಸ್ಯಗಳನ್ನು ಬಳುವನ ಹಳ್ಳಿ ಗ್ರಾಮದಲ್ಲಿ ನೆಡಿಸಲಾಯಿತು.
ಡಾ. ಅ. ನ.ಯಲ್ಲಪ್ಪ ರೆಡ್ಡಿ ಅವರು ಔಷಧಿ ಸಸ್ಯಗಳಾದ ಸರಸ್ವತಿ, ಬಕುಳ, ನಾಗದಾಳಿ, ಶಂಖಪುಷ್ಪಿ, ಚಕ್ರಮುನಿ ಮುಂತಾದವುಗಳ ಮಹತ್ವವನ್ನು ಮತ್ತು ಅದರಿಂದಾಗುವ ಉಪಯೋಗವನ್ನು ಮಕ್ಕಳಿಗೆ ತಿಳಿಸಿದರು. ಪ್ರತಿ ಮನೆಯಲ್ಲಿ ಮತ್ತು ಶಾಲೆಯಲ್ಲಿ ಮಕ್ಕಳು ಸಸ್ಯಗಳನ್ನು ನೆಟ್ಟು ಬೆಳೆಸಬೇಕೆಂದು ಮನವಿ ಮಾಡಿ, ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದರು, ಮಕ್ಕಳು ಸಕ್ರಿಯ ನಾಗರಿಕರಾಗುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಕಥೆಗಳ ರೂಪದಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ೨೦೧೪ ರಲ್ಲಿ ಸಕ್ರಿಯ ನಾಗರಿಕರಾಗಿ ಕಾರ್ಯವನ್ನು ಮಾಡಿದ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಿವುದರ ಮೂಲಕ ಉತ್ತೇಜಿಸಲಾಯಿತು.
ಜಿಲ್ಲಾ ಸ್ವಚ್ಛಭಾರತ್ ಮಿಶನ್ನ ಸಂಯೋಜಕರಾದ ನರಸಿಂಹಮೂರ್ತಿ, ಸುಮ, ಭಾಸ್ಕರ್, ಗ್ರಾಮ ನೈರ್ಮಲ್ಯಕ್ಕೆ ಶೌಚಾಲಯದ ಮಹತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳಲ್ಲಿ ಸಮಾಜದ ಬಗ್ಗೆ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೆಂಬುವುದನ್ನು ತಿಳಿಸಿಕೊಟ್ಟರು. ಇದರಿಂದ ಪ್ರೇರಿತರಾಗಿ ಈ ಸಂದರ್ಭದಲ್ಲಿ ೩೧ ಮಕ್ಕಳು ಶೌಚಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರು.
ಮೇಲೂರು ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ, ಮಳ್ಳೂರು ಶಾಲಾ ಶಿಕ್ಷಕ ಅಶ್ವಥ್, ಸಿ.ಎಂ.ಸಿ.ಎ. ಸಂಸ್ಥೆಯ ನಿರ್ವಾಹಕ ಟ್ರಸ್ಟಿ ಪ್ರಿಯಾಕೃಷ್ಣಮೂರ್ತಿ, ಸಿ.ಎಂ.ಸಿ.ಎ. ಸಂಸ್ಥೆಯ ಸರ್ಕಾರಿ ಶಾಲಾ ಕಾರ್ಯಕ್ರಮದ ಸಂಯೋಜಕ ಮರುಳಪ್ಪ, ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಶೇಂಗಾನ್ ದಾಸ್ಗುಪ್ತ, ಬಳುವನಹಳ್ಳಿಯ ಶ್ರೀ ಸೀತಾರಾಮ ವಿದ್ಯಾಚಂದ್ರ ಸಂಸ್ಥೆಯ ಮೇಲ್ವಿಚಾರಕರಾದ ವೇಣುಗೋಪಾಲ್, ಮೇನಕ, ಶಾಲೆಯ ಮುಖ್ಯೋಪಾಧ್ಯಯ ಸುರೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -