ತಾಲ್ಲೂಕಿನ 22 ಗ್ರಾಮ ಪಂಚಾಯತಿಗಳ ಚುನಾವಣೆಯು ಮಂಗಳವಾರ ನಡೆಯಿತು. ಕೆಲವು ಗ್ರಾಮಗಳಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ, 144 ಸೆಕ್ಷನ್ ಜಾರಿ, ಲಾಠಿ ಪ್ರಹಾರ ನಡೆದಿದ್ದು, ಉಳಿದೆಡೆ ಚುನಾವಣೆಯು ಶಾಂತವಾಗಿ ನಡೆದಿದೆ. ಮತಪಟ್ಟಿ ಪರಿಷ್ಕರಣೆಯಲ್ಲಿನ ಗೊಂದಲಗಳು ಹಲವೆಡೆ ಘರ್ಷಣೆಗೆ ಕಾರಣವೆನ್ನಲಾಗಿದೆ.
ತಾಲ್ಲೂಕಿನ ಲಕ್ಕಹಳ್ಳಿಯಲ್ಲಿ ಇಬ್ಬಿಬ್ಬರು ಹೋಗಿ ಮತ ಚಲಾಯಿಸಲು ಹೋದಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆಯಿತು. ಕೆ.ಮುತ್ತುಗದಹಳ್ಳಿಯಲ್ಲೂ ಗುಂಪು ಘರ್ಷಣೆ ನಡೆದಿದೆ. ಬೆಳ್ಳೂಟಿಯಲ್ಲಿ ಸೋಮವಾರ ರಾತ್ರಿ ಬೇರೆ ಊರಿನವರು ಒಂದು ಪಕ್ಷದ ಪರವಾಗಿ ಬಂದರೆಂದು ಕಲ್ಲುತೂರಾಟ ನಡೆದಿದ್ದು, ಗಾಯಗೊಂಡ ಕೆಂಚಪ್ಪ ಎಂಬುವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತಾಲ್ಲೂಕಿನ ಮಳ್ಳೂರಿನಲ್ಲಿ ಮತಗಟ್ಟೆಯ ವೀಕ್ಷಣೆಗೆ ತೆರಳಿದ್ದ ಶಾಸಕ ಎಂ.ರಾಜಣ್ಣ ಅವರ ಹಿಂದೆ ಹೆಚ್ಚು ಮಂದಿ ಕಾರ್ಯಕರ್ತರಿದ್ದುದರಿಂದ ಅವರನ್ನು ತಡೆದದ್ದರಿಂದ ಗುಂಪು ಘರ್ಷಣೆ ನಡೆದು, ಪೊಲೀಸರು ಲಾಠಿ ಚಾರ್ಜ್ ನಡೆಸಿ 144 ಸೆಕ್ಷನ್ ಜಾರಿ ಮಾಡಿದ್ದರು. ನಂತರ ಪೊಲೀಸರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ 144 ಸೆಕ್ಷನ್ ಹಿಂಪಡೆದು ಸೂಕ್ತ ಬಂದೋಬಸ್ತಿನಲ್ಲಿ ಮತದಾನ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಏಜೆಂಟರ ಮೊಬೈಲ್ ಫೋನ್ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪೊಲೀಸರಿಂದ ಏಟು ತಿಂದಿದ್ದ ಶಿವಪ್ಪ ಎಂಬುವರನ್ನು ಪೊಲೀಸರೇ ತಮ್ಮ ಜೀಪಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು.
ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಗುಂಪು ಘರ್ಷಣೆ ನಡೆದು ನರಸಿಂಹಪ್ಪ(45) ಎಂಬುವರು ಗಾಯಗೊಂಡಿದ್ದಾರೆ. ಚೀಮಂಗಲದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಪೊಲೀಸ್ ಜೀಪು ಜಖಂಗೊಂಡಿದೆ.
ಉಳಿದಂತೆ ತಾಲ್ಲೂಕಿನೆಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯಿತು. ವೀಳೆದೆಲೆ ಸುಣ್ಣ ಅಡಿಕೆ ಬಾಳೆಹಣ್ಣು ಕೊಟ್ಟು ವಿವಿಧ ಪಕ್ಷಗಳ ಬೆಂಬಲಿತರು ಮತದಾರರನ್ನು ಓಲೈಸುತ್ತಿದ್ದುದು ಕಂಡುಬಂದಿತು. ಶಾಸಕ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಸರದಿಯಲ್ಲಿ ಬಂದು ಮತ ಚಲಾಯಿಸಿದರು.
- Advertisement -
- Advertisement -
- Advertisement -
- Advertisement -