ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್ ಅವರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದೆ. ರಾಷ್ಟ್ರದ ಒಟ್ಟು 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಗೆ ಭಾಜನರಾದ ರಾಜ್ಯದ ಮೂವರು ಶಿಕ್ಷಕರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಶಿಕ್ಷಕರೂ ಒಬ್ಬರಾಗಿರುವುದು ವಿಶೇಷ.
ಕರ್ನಾಟಕದ ಶಿಕ್ಷಕರಾದ ಡಾ.ಜಿ.ರಮೇಶಪ್ಪ, ಎಂ.ಶಿವಕುಮಾರ್, ಆರ್.ಎನ್.ಶೈಲಾ ಅವರು ಸಲ್ಲಿಸಿರುವ ಸೇವೆಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದ್ದು, ಸೆಪ್ಟೆಂಬರ್ 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪ್ರಮಾಣಪತ್ರದೊಂದಿಗೆ ಐವತ್ತು ಸಾವಿರ ರೂ ನಗದು ಹಾಗೂ ಬೆಳ್ಳಿ ಪದಕವನ್ನು ಇವರಿಗೆ ಪ್ರಧಾನ ಮಾಡಲಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಡಾ.ಶಿವಕುಮಾರ್, ಭವಿಷ್ಯದಲ್ಲಿ ಇಂಟರ್‌ನೆಟ್ ಆಧಾರಿತ ಮಕ್ಕಳ ಶಿಕ್ಷಣದ ಕುರಿತಂತೆ ಆಸಕ್ತಿ ಹೊಂದಿದ್ದಾರೆ. ಎಂಎಸ್ಸಿ , ಬಿಎಡ್ ಪೂರೈಸಿರುವ ಇವರು ಮಿಲೆನಿಯಮ್ ಜನರೇಷನ್ ವಿದ್ಯಾರ್ಥಿಗಳಿಗೆ ಇಂಟರ್‍ನೆಟ್ ಮೊಬೈಲ್ ಅಪ್ಲಿಕೇಷನ್‍ನಂತಹ ಸಲಕರಣೆಗಳ ಮೂಲಕವೇ ಶಿಕ್ಷಣ ನೀಡಿದರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬ ಕಾರಣದಿಂದ ಮೂರು ಮೊಬೈಲ್ ಅಪ್ಲಿಕೇಷನ್‌ಗಳನ್ನು ರೂಪಿಸಿರುವ ಇವರು ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದರಲ್ಲಿ ಸರಳ ಗಣಿತ ಸೂತ್ರಗಳ ಕಲಿಕೆ ಸೇರಿದಂತೆ ಕಲಿಕಾ ಮಾಧ್ಯಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 200ಕ್ಕೂ ಹೆಚ್ಚು ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕುರಿತಂತೆ ತರಗತಿಗಳನ್ನು ಉಚಿತವಾಗಿ ರಜಾ ದಿನಗಳಲ್ಲಿ ನಡೆಸಿರುವ ಇವರು ಶಿಕ್ಷಕರಾಗಿ 14 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಭವಿಷ್ಯದ ಶಿಕ್ಷಣದಲ್ಲಿ ಇಂಟರ್‌ನೆಟ್ ಆಧರಿಸಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹೆಚ್ಚಿನ ಅನುಕೂಲವಿದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದ್ದರು.
‘ಈ ಪ್ರಶಸ್ತಿ ನನಗೆ ಲಭಿಸಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಇದಕ್ಕೆ ನನಗೆ ಸಹೋದ್ಯೋಗಿಗಳು, ಮುಖ್ಯ ಶಿಕ್ಷಕರಾದ ಶಿವಶಂಕರ್, ಡಯಟ್‌ನ ಪ್ರಾಂಶುಪಾಲರಾದ ಶಾರದಮ್ಮ, ಶಿಕ್ಷಕರಾದ ಸುಮಿತ್ರಾಬಾಯಿ, ಕಾಮಾಕ್ಷಮ್ಮ, ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ ಮತ್ತು ಸಹಕಾರ ಕಾರಣವಾಗಿದೆ’ ಎಂದು ಶಿಕ್ಷಕ ಡಾ.ಎಂ.ಶಿವಕುಮಾರ್ ತಿಳಿಸಿದರು.
- Advertisement -
- Advertisement -
- Advertisement -