‘ವರ್ಗಾವಣೆ ಮಾಡಿರುವ ನಮ್ಮ ಶಾಲೆಯ ಶಿಕ್ಷಕಿ ಎಂ.ಎಸ್.ಪ್ರಭಾವತಿಯವರನ್ನು ಉಳಿಸಿಕೊಡಿ. ಇಲ್ಲದಿದ್ದಲ್ಲಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸುತ್ತೇವೆ’ ಎಂದು ತಾಲ್ಲೂಕಿನ ಚೀಮನಹಳ್ಳಿಯ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಮುತ್ತಿಗೆ ಹಾಕಿದ ತಾಲ್ಲೂಕಿನ ಚೀಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕಿ ಎಂ.ಎಸ್.ಪ್ರಭಾವತಿಯವರ ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಘೋಷಣೆಗಳನ್ನು ಕೂಗಿದರು.
ಸುಮಾರು 5 ವರ್ಷಗಳಿಂದ ಶಿಕ್ಷಕಿ ಎಂ.ಎಸ್.ಪ್ರಭಾವತಿಯವರು ನಮ್ಮೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಹೆಚ್ಚುವರಿ ಶಿಕ್ಷಕಿಯೆಂದು ಗುರುತಿಸಿ ಬೇರೆಡೆಗೆ ವರ್ಗಾವಣೆ ಮಾಡುತ್ತಿದ್ದಾರೆ. ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಎಂ.ಎಸ್.ಪ್ರಭಾವತಿಯವರು ಉತ್ತಮ ಪಾಠ ಪ್ರವಚನ ಹಾಗೂ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಎಲ್ಲರ ಹೃದಯವನ್ನು ಗೆದ್ದು ಶಾಲೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಸಾರ್ವಜನಿಕರಿಂದ ಶಾಲೆಗೆ ಕೊಡುಗೆಗಳನ್ನು ಸಂಗ್ರಹಿಸಿ, ಪುಸ್ತಕ, ಸಮವಸ್ತ್ರಗಳನ್ನು ಮುಂತಾದವುಗಳನ್ನು ಕೊಡಿಸುತ್ತಿದ್ದಾರೆ. ಶಾಲೆಯ ಪ್ರಗತಿಯ ಹಿತದೃಷ್ಟಿಯಿಂದ ಅವರನ್ನು ವರ್ಗಾವಣೆ ಮಾಡಬಾರದು. ಒಂದು ವೇಳೆ ವರ್ಗಾವಣೆ ಮಾಡಿದ್ದಲ್ಲಿ ನಾವೆಲ್ಲಾ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಪೋಷಕರು ತಿಳಿಸಿದರು.
ಚೀಮನಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಮನವಿಯನ್ನು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಗ್ರಾಮಸ್ಥರು ಹಾಗೂ ಮಕ್ಕಳ ಮನವಿಯನ್ನು ಸ್ವೀಕರಿಸಿದ್ದು, ಅವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
- Advertisement -
- Advertisement -
- Advertisement -