ಹಂಡಿಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಚುಟುಕು ಕವಿ, ಶಿಶುಗೀತೆಗಳ ಕವಿ ಮತ್ತು ಸಾಹಿತಿ ಜಿ.ಪಿ.ರಾಜರತ್ನಂ ಅವರ ಜನ್ಮದಿನದ ಪ್ರಯುಕ್ತ ನಡೆಸಿದ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಜಿ.ಪಿ. ರಾಜರತ್ನಂ ಅವರು ನಮಗೆ ನಾವು ಚಿಕ್ಕವರಿದ್ದಾಗ ಉಣಬಡಿಸಿದ್ದ “ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ”, “ಒಂದು ಎರಡು ಬಾಳೆಲೆ ಹರಡು”, “ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು”, “ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ”, “ರೊಟ್ಟಿ ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟಿ ತಟ್ಟಪ್ಪ”… ಈ ಪದ್ಯಗಳು ಈಗಲೂ ಅಷ್ಟೇ ಮುದ ನೀಡುತ್ತವೆ ಎಂದು ಅವರು ತಿಳಿಸಿದರು.
ರಾಜರತ್ನಂ ಎಳೆಯ ಮಕ್ಕಳಿಗೆ ಅಗತ್ಯವಾದ ತಿಳಿಯಾದ ಸಾಹಿತ್ಯವನ್ನು ರಚಿಸಿಕೊಟ್ಟರು. ಬೆಳೆದವರ ಗಟ್ಟಿಹಲ್ಲಿಗೆ ತಕ್ಕುದಾದ ಪುಷ್ಟಿಕರ ವಿಚಾರದ ಉಂಡೆಗಳನ್ನು ಕಟ್ಟಿಕೊಟ್ಟರು. ಹಾಗೆಯೇ ದೊಡ್ಡವರ ಮೆಲುಕಿಗೆ ಚಿಂತನೆಯ ಗ್ರಾಸವನ್ನು ಒದಗಿಸಿದರು. ಅವರ ಮಹತ್ವಪೂರ್ಣ ಕಾರ್ಯವೆಂದರೆ ಸಾಹಿತ್ಯ ಪರಿಚಾರಿಕೆಯ ಕೆಲಸ. ತಮ್ಮದು ಬೇರೆಯವರದು ಎಂಬ ಭೇದ ಇಲ್ಲದೆ ಎಲ್ಲರ ಸಾಹಿತ್ಯವನ್ನೂ ಅವರು ಜನರಿಗೆ ಪರಿಚಯ ಮಾಡಿ ಕೊಟ್ಟರು.
ಶಿಕ್ಷಕ ರಾಮಾಂಜಿ ಮಾತನಾಡಿ, ರಾಜರತ್ನಂ ಅವರು “ಚೀನಾದೇಶದ ಬೌದ್ಧ ಯಾತ್ರಿಕರು”, “ಧರ್ಮದಾನಿ ಬುದ್ಧ”, “ಬುದ್ಧನ ಜಾತಕಗಳು” ಮುಂತಾದ ಬೌದ್ಧಕೃತಿಗಳನ್ನು ರಚಿಸಿದ್ದಾರೆ. “ಭಗವಾನ್ ಮಹಾವೀರ”, “ಶ್ರೀ ಗೋಮಟೇಶ್ವರ”, “ಮಹಾವೀರರ ಮಾತುಕತೆ”, “ಭಗವಾನ್ ಪಾರ್ಶ್ವನಾಥ”, “ಜೈನರ ಅರವತ್ತು ಮೂವರು” ಮೊದಲಾದ ಜೈನ ಸಾಹಿತ್ಯವನ್ನೂ ಸೃಷ್ಟಿಸಿದ್ದಾರೆ. ಕನ್ನಡದಲ್ಲಿ ಶಿಶುಸಾಹಿತ್ಯ ಪ್ರಕಾರವನ್ನು ರಾಜರತ್ನಂ ಪೋಷಿಸಿ ಬೆಳೆಸಿದರು. ಖಾದಿಯ ಉಡುಪು ಅವರ ಬಾಳಿನ ವ್ರತವೇ ಆಗಿತ್ತು. ನೆಹರೂ ಅವರು ಮಾಡಿದ ಒಂದು ಭಾಷಣ “ಗಂಡುಗೊಡಲಿ”ಯಂಥ ಉತ್ತಮ ವಿಶಿಷ್ಟ ನಾಟಕಕ್ಕೆ ಪ್ರೇರಕವಾಯಿತು ಎಂದು ವಿವರಿಸಿದರು.
ಶಾಲೆಯ ವಿದ್ಯಾರ್ಥಿಗಳಿಗೆ ರಾಜರತ್ನಂ ಅವರ ಕುರಿತಂತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಾದ ಎಚ್.ಎಂ.ರೋಹಿತ್ (ಪ್ರಥಮ), ಎಚ್.ಜಿ.ಯಶ್ವಂತ್ (ದ್ವಿತೀಯ), ಎಚ್.ಆರ್. ಮೈತ್ರಿ (ತೃತೀಯ) ಅವರಿಗೆ ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕಿ ಎನ್.ಶೋಭಾ, ಶಿಕ್ಷಕರಾದ ಎಂ.ಜೆ.ಸುಜಾತ, ಕೆ.ಪದ್ಮಾವತಿ, ಪಿ.ವೆಂಕಟಲಕ್ಷ್ಮಮ್ಮ, ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಪಿ.ಡಿ.ಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಮೋಹನ್, ಸೋಮಶೇಖರ್, ಅಂಬರೀಶ್ ಹಾಜರಿದ್ದರು.
- Advertisement -
- Advertisement -
- Advertisement -