ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್.ನರಸಿಂಹಯ್ಯ ಅವರ ಜನ್ಮದಿನದ ಪ್ರಯುಕ್ತ ಮಕ್ಕಳೊಂದಿಗೆ ಸೇರಿ ಗಸಗಸೆ ಮತ್ತು ನೇರಳೆ ಗಿಡಗಳನ್ನು ನೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಅವಿಭಾಜ್ಯ ಕೋಲಾರ ಜಿಲ್ಲೆಯ ಎರಡು ರತ್ನಗಳಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್.ನರಸಿಂಹಯ್ಯ ಅವರ ಜನ್ಮದಿನವನ್ನು ಗಿಡಗಳನ್ನು ನೆಟ್ಟು, ಅವರ ನೆನಪುಗಳನ್ನು ಹೃದಯದಲ್ಲಿ ಬಿತ್ತುವ ಮೂಲಕ ಆಚರಿಸೋಣ ಎಂದು ಎಂದು ಅವರು ತಿಳಿಸಿದರು.
ಕನ್ನಡಕ್ಕೆ ಸಣ್ಣಕಥೆಗಳು ಎಂಬ ಮಹತ್ವದ ಪ್ರಕಾರವನ್ನು ಪರಿಚಯಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್. ಮಾಸ್ತಿ, ಕನ್ನಡದ ಆಸ್ತಿ ಎಂದೇ ಅವರನ್ನು ಹೆಮ್ಮೆಯಿಂದ ಸ್ಮರಿಸುವುದು ಕರ್ನಾಟಕದಲ್ಲಿ ಒಂದು ಪರಂಪರೆಯೇ ಆಗಿದೆ. ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ ಹುಟ್ಟೂರಿನ ಹೆಸರು ‘ಮಾಸ್ತಿ’ ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ.ಎಚ್.ನರಸಿಂಹಯ್ಯನವರ ಜನ್ಮದಿನವಿಂದು. ತಮ್ಮ ವಿದ್ಯಾರ್ಥಿಗಳ ಪ್ರೀತಿಯ ‘ಎಚ್. ಎನ್’ ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿತ್ತು. ಕರ್ನಾಟಕದ ಪ್ರಮುಖ ಶಿಕ್ಷಣವೇತ್ತರೂ, ಗಾಂಧೀವಾದಿಗಳೂ, ಮಾನವೀಯ ಸಮಾಜ ಸುಧಾಕರೂ ಆಗಿ ಎಚ್. ಎನ್ ಮಾಡಿರುವ ಕೆಲಸ ಅಪಾರವಾದದ್ದು. ಅವರದು ನುಡಿದಂತೆ ನಡೆದ, ನಡೆದಂತೆ ನುಡಿದ ಜೀವನ ಎಂದು ಹೇಳಿದರು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿ, ನಮ್ಮ ಜಿಲ್ಲೆಯ ಶ್ರೇಷ್ಠ ವ್ಯಕ್ತಿಗಳಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್.ನರಸಿಂಹಯ್ಯ ಅವರ ಬದುಕನ್ನು ಮಕ್ಕಳೆಲ್ಲಾ ಅರಿಯಬೇಕು. ಅವರ ಬರಹಗಳನ್ನು ಪ್ರತಿಯೊಬ್ಬರೂ ಓದಬೇಕು. ಬರೆದಂತೆಯೇ ಬದುಕಿದ ಅವರು ಜನಿಸಿದ ಪುಣ್ಯಭೂಮಿ ನಮ್ಮದು ಎಂದು ಹೇಳಿದರು.
ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ಅಂಗನವಾಡಿ ಶಿಕ್ಷಕಿ ನಳಿನಮ್ಮ, ಸಹಾಯಕಿ ನೀಲಮ್ಮ, ವೆಂಕಟಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -