ಕಳೆದ ನಾಲ್ಕೈದು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಸುಮಾರು 30 ಮನೆಗಳು ಕುಸಿದಿವೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಮಳೆಯಿಂದಾದ ತೊಂದರೆಗಳು ಹಾಗೂ ಅನಾಹುತಗಳ ಕುರಿತಂತೆ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿದ್ದು ಪರಿಹಾರಕ್ಕೆ ಕೋರಲಾಗಿದೆ ಎಂದಿದ್ದಾರೆ.
ಶಿಡ್ಲಘಟ್ಟ ನಗರದಲ್ಲಿ ಶುಕ್ರವಾರ ಬೇಳಗಿನ ಜಾವ ಜೌಗುಪೇಟೆಯ ಪುಟ್ಟಮ್ಮ ಎಂಬುವವರ ಮನೆ ಕುಸಿದಿದೆ. ಮನೆ ಕುಸಿಯುವ ಶಬ್ಧ ಕೇಳಿ ಮನೆಯಲ್ಲಿ ಒಬ್ಬಳೇ ಇದ್ದ ಪುಟ್ಟಮ್ಮ ಹೊರಕ್ಕೆ ಬಂದಿದ್ದರಿಂದಾಗಿ ಪ್ರಾಣ ಹಾನಿ ತಪ್ಪಿದೆ.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ಒಂಟೂರು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಚಿಕ್ಕಪಾಪಣ್ಣ ಅವರ ಮನೆ ಕುಸಿದಿದೆ. ಆ ಮನೆಯಲ್ಲಿ 13 ಜನ ವಾಸವಾಗಿದ್ದು, ಅದೃಷ್ಟವಶಾತ್ ಮನೆ ಕುಸಿಯುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಪ್ರಾಣ ಹಾನಿ ತಪ್ಪಿದೆ. ಸ್ಥಳಕ್ಕೆ ಶಾಸಕ ಎಂ.ರಾಜಣ್ಣ ಭೇಟಿ ನೀಡಿ ಸಾಂತ್ವನ ಹೇಳಿ 10 ಸಾವಿರ ರೂಗಳ ಸಹಾಯಧನವನ್ನು ನೀಡಿದ್ದಾರೆ. ಗ್ರಾಮಸ್ಥರೆಲ್ಲಾ ಸೇರಿ ಮನೆ ಕಳೆದುಕೊಂಡ ಕುಟುಂಬದವರಿಗೆ ತಾತ್ಕಾಲಿಕವಾಗಿ ವಾಸವಿರಲು ಶೀಟ್ ಹೊದಿಕೆಯನ್ನು ರೂಪಿಸಿಕೊಟ್ಟಿದ್ದು, ಮಾನವೀಯತೆಯನ್ನು ಮೆರೆದಿದ್ದಾರೆ.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ವೆಂಕಟೇಶ್, ಕನಕಪ್ರಸಾದ್, ತಿಮ್ಮಯ್ಯ, ನಾಗರಾಜ್, ದ್ಯಾವಪ್ಪ, ಮಳ್ಳೂರಯ್ಯ, ಭೈರಾರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -