ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಮಂಗಳವಾರ ನೇಗಿಲ ಯೋಗಿ ಅನ್ನದಾತ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಂಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಮ್ಮೇಳನಾಧ್ಯಕ್ಷೆ ದೇವರಮಳ್ಳೂರು ವಿ.ಯಶೋದಮ್ಮ ಮಾತನಾಡಿದರು.
ಶಿಡ್ಲಘಟ್ಟವನ್ನು ಕಟ್ಟಿದ್ದೇ ಒಬ್ಬ ಮಹಿಳೆ. ಸುಮಾರು ೪೯೩ ವರ್ಷಗಳ ಹಿಂದೆ ಉಜ್ಜನಿ ಮೂಲದ ಕೆಂಪೇಗೌಡನ ಮಡದಿ ಹಲಸೂರಮ್ಮ ಈ ಊರನ್ನು ಕಟ್ಟಿಸಿ ತನ್ನ ಮಾವನಾದ ಸಿಡಿಲಗೌಡನ ಹೆಸರಿನಿಂದ ಕರೆದಳು. ಜನರ ಬದುಕಿಗೆ ಅವಶ್ಯವಾದ ನೀರಿಗಾಗಿ ಆ ತಾಯಿ ದೂರದೃಷ್ಟಿಯಿಂದ ಕಟ್ಟಿಸಿದ ಎರಡು ಕೆರೆಯನ್ನು ನಾವು ಉಳಿಸಿಕೊಳ್ಳುವುದೇ ಆ ತಾಯಿಗೆ ನಾವು ನೀಡುವ ದೊಡ್ಡ ಕೊಡುಗೆ ಎಂದು ಅವರು ತಿಳಿಸಿದರು.
ನಮ್ಮ ಬಹುತೇಕ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಗ್ರಾಹಕ ನೀಡುವ ಬೆಲೆಯಲ್ಲಿ ಶೇ ೩೦ ರಷ್ಟು ಪ್ರಮಾಣವೂ ರೈತರಿಗೆ ಸಿಗುತ್ತಿಲ್ಲ. ಈ ಅಂತರವನ್ನು ತಗ್ಗಿಸಿದರೆ ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾಗಿದೆ. ನಮ್ಮ ಕೃಷಿ ಅರ್ಥ ವ್ಯವಸ್ಥೆಯ ಅತಿ ದೊಡ್ಡ ಸಮಸ್ಯೆ ಎಂದರೆ ಉತ್ಪಾದನೆ ಮತ್ತು ಬೆಲೆಗಳ ತೀವ್ರ ಏರಿಳಿಕೆ ಹಾಗೂ ಅನಿಶ್ಚಿತತೆ. ಸದಾ ಮಳೆ ಮತ್ತು ಮಾರುಕಟ್ಟೆಯಲ್ಲಿ ಜೂಜಾಡುತ್ತಿರುವ ರೈತಾಪಿ ವರ್ಗಕ್ಕೆ ನಿಶ್ಚಿತ ಆದಾಯ, ಅದರ ಊಹೆ ಹಾಗೂ ಮುನ್ನಂದಾಜು ಅಸಾಧ್ಯವಾಗಿದೆ.
ನಮ್ಮ ಮಣ್ಣಿನಲ್ಲಿ ಕಲೆಯಿದೆ. ಅದನ್ನು ಪೋಷಿಸಲು ಪೂರಕ ವಾತಾವರಣವನ್ನು ಕಲ್ಪಿಸಬೇಕಿದೆ. ನಗರ ಸೇರಿದಂತೆ ಪ್ರತಿಯೊಂದು ಪ್ರಮುಖ ಗ್ರಾಮದಲ್ಲೂ ರಂಗಭೂಮಿಗೆ, ಕಲೆಗೆ ಅತ್ಯಗತ್ಯವಾದ ರಂಗಮಂದಿರವನ್ನು ನಿರ್ಮಿಸಬೇಕು. ಕಲೆಗೆ ಪ್ರಸಿದ್ಧವಾದ ಶಿಡ್ಲಘಟ್ಟದಲ್ಲಿ ಇದುವರೆಗೂ ರಂಗಮಂದಿರ ನಿರ್ಮಿಸಿಲ್ಲ. ಈಗಲಾದರೂ ಕಲಾಸೇವೆಗೆ ದೇವಾಲಯದಂತಿರುವ ರಂಗಮಂದಿರದ ನಿರ್ಮಾಣವಾಗಲಿ ಎಂದು ಈ ವೇದಿಕೆಯ ಮೂಲಕ ಆಶಿಸುತ್ತೇನೆ. ತಾಲ್ಲೂಕಿನ ಪ್ರಮುಖ ದೇಗುಲಗಳು ಕಲೆಯನ್ನು ಬೆಳೆಸುವ ಪ್ರೋತ್ಸಾಹಿಸುವ ಸಾಂಸ್ಕೃತಿಕ ಕೇಂದ್ರಗಳಾಗಲಿ ಎಂದು ಬಯಸುವುದಾಗಿ ನುಡಿದರು.
ಕೆರೆ ಕಾಲುವೆಗಳನ್ನು ರಕ್ಷಿಸಿಕೊಳ್ಳಬೇಕು. ನೀರು ನಿಧಿ ಎನ್ನುವ ತಜ್ಞರ ನುಡಿಯ ಸತ್ಯ ಅರಿವಾಗತೊಡಗಿದೆ. ಈಗಲಾದರೂ ಎಚ್ಚೆತ್ತು ಮಳೆ ನೀರು ಸಂಗ್ರಹಕ್ಕೆ ಎಲ್ಲರೂ ಮನಸ್ಸು ಮಾಡಬೇಕಿದೆ. ಮನೆಗಳ ಮಾಡಿನ ಮೇಲೆ ಬೀಳುವ ಮಳೆ ನೀರನ್ನು ಪೈಪ್ ಗಳ ಮೂಲಕ ಹಾಯಿಸಿ ಮನೆಯ ಆಸುಪಾಸಿನಲ್ಲಿ ಒಂದು ತೊಟ್ಟಿ ನಿರ್ಮಿಸಿ, ಅದರಲ್ಲಿ ಸಂಗ್ರಹವಾಗುವ ನೀರನ್ನು ಉಪಯೋಗಿಸಬೇಕು.
ಜಲ ಮರುಪೂರಣ ಅತ್ಯಗತ್ಯ. ಬೀಳುವ ಮಳೆಯನ್ನು ಇಂಗಿಸಬೇಕು. ಇದು ನಮ್ಮ ವಾಸದ ಮನೆ, ಆವರಣ, ತೋಟ, ಮೈದಾನ, ಬಯಲುಗಳಲ್ಲಿ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಬವಣೆ ಹೋಗಲಾಡಿಸಬಹುದು. ಬಿದ್ದ ಮಳೆ ನೀರು ರಭಸದಿಂದ ಹರಿದುಹೋಗದಂತೆ ಚಿಕ್ಕ ಚಿಕ್ಕ ಬದುಗಳನ್ನು ಹಾಕಿ, ಅಲ್ಲಲ್ಲಿ ಚಿಕ್ಕ ಚಿಕ್ಕ ಇಂಗು ಗುಂಡಿಗಳನ್ನು ಅನುಕೂಲಕ್ಕೆ ತಕ್ಕಂತೆ ನಿರ್ಮಿಸಬೇಕು.
ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಕಾಪಾಡುತ್ತಾ ಪರಿಸರ ರಕ್ಷಣೆಗೆ ಕಾಳಜಿ ವಹಿಸಬೇಕು. ಪರಿಸರ ಉಳಿದಲ್ಲಿ ಮಳೆ ಬರುತ್ತದೆ, ನೀರು ಇಂಗಿಸಿದಲ್ಲಿ ನಮ್ಮ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಲು ಎಲ್ಲರೂ ಒಗ್ಗೂಡಬೇಕು. ನಮ್ಮ ಭಾಷೆಯನ್ನು ಮಕ್ಕಳಿಗೆ ಇಷ್ಟವಾಗುವಂತೆ ಕಲಿಸಲು ಕಲಾ ಮಾಧ್ಯಮವನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಇದು ಮಕ್ಕಳ ಪ್ರತಿಭೆ ಹೊರಬರಲು ಕಾರಣವಾಗುತ್ತದೆ ಎಂದರು.
ಚಾಲನೆ
ವಾಸವಿ ಕಲ್ಯಾಣ ಮಂಟಪದ ಬೆಳಗ್ಗೆ ತಹಶೀಲ್ದಾರ್ ಎಂ.ದಯಾನಂದ ರಾಷ್ಟ್ರ ಧ್ವಜಾರೋಹಣ, ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ನಾಡಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ .ಎಂ.ತ್ಯಾಗರಾಜ್ ಪರಿಷತ್ತಿನ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು. ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ನಗರದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ನೆರವೇರಿಸಿದರೆ ನಾಡಗೀತೆಯನ್ನು ಟಿ.ನಾರಾಯಣಸ್ವಾಮಿ ತಂಡ ನಡೆಸಿಕೊಟ್ಟರು.
ಸಮ್ಮೇಳನಾಧ್ಯಕ್ಷೆ ದೇವರಮಳ್ಳೂರು ವಿ.ಯಶೋದಮ್ಮ ಅವರನ್ನು ತೆರೆದ ಜೀಪಿನಲ್ಲಿ ನಗರದ ಬಸ್ ನಿಲ್ದಾಣದಿಂದ ಕರೆತರಲಾಯಿತು. ಮೆರವಣಿಗೆಗೆ ಸರ್ಕಲ್ ಇನ್ಸ್ ಪೆಕ್ಟರ್ ಜಿ.ಎನ್.ಆನಂದಕುಮಾರ್ ಚಾಲನೆ ನೀಡಿದರು.
ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಶಾಲೆಗಳ ವಾದ್ಯವೃಂದಗಳು, ವಾಲಗ ಡೋಲುಗಳ ಮಂಗಳವಾದ್ಯ, ವೀರಗಾಸೆ ಕಲಾತಂಡಗಳೊಂದಿಗೆ ಆಗಮಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ರಸ್ತೆಯುದ್ದಕ್ಕೂ ಜನರು ನಿಂತು ನೋಡಿದರು. ಹೂವನ್ನು ಚೆಲ್ಲಿ ಅವರನ್ನು ಸ್ವಾಗತಿಸಿದರು.
ಸಾಧಕರಿಗೆ ಸನ್ಮಾನ
ಕಸಾಪ ವತಿಯಿಂದ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಎಲೆಮರೆಯ ಕಾಯಿಗಳಂತೆ ತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ನಾಡಿನ ಇತಿಹಾಸವನ್ನು ಗಮನಿಸಿದಾಗ ಈ ನಾಡನ್ನು ಕಟ್ಟಿದ್ದು ರಾಜಕೀಯ ನಾಯಕರು ಮಾತ್ರವಲ್ಲ, ರೈತರು, ಧಾರ್ಮಿಕ ನಾಯಕರು, ವಿಜ್ಞಾನಿಗಳು, ಬುದ್ದಿಜೀವಿಗಳು, ಕಲಾವಿದರು ಹೀಗೆ ಸಮಾಜದ ಎಲ್ಲಾ ವರ್ಗದವರೂ ನಾಡಿನ ನಿರ್ಮಾಣ ಕಾರ್ಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ನಮ್ಮ ಸಮಾಜ ಈ ಎಲ್ಲರ ಕೊಡುಗೆಗಳ ಒಟ್ಟು ಮೊತ್ತವಾಗಿದೆ ಎಂದರು.
ನಿತಿನ್ ಗೌಡ, ಎಂ.ಎಸ್ಸಿ (ಬಂಗಾರದ ಪದಕ), ಅರುಣ್ ಕುಮಾರ್ (ಕ್ರೀಡೆ), ಡಾ.ಪ್ರಮೋದ್ (ವೈದ್ಯಕೀಯ), ಹುಜಗೂರು ರಾಮಣ್ಣ (ಕೃಷಿ ಪಂಡಿತರು), ಎನ್.ಶ್ರೀಕಾಂತ್ (ಶಿಕ್ಷಣ), ಎಂ.ಎಸ್.ವೆಂಕಟೇಶಮೂರ್ತಿ (ಧಾರ್ಮಿಕ), ಗಾಯಿತ್ರಮ್ಮ (ಅಂಗನವಾಡಿ ಸೇವೆ), ಶಾಂತಮ್ಮ (ಅಂಧಮಕ್ಕಳ ಶಾಲೆಯಲ್ಲಿ ಸೇವೆ), ಅಬ್ಲೂಡು ಚನ್ನಕೃಷ್ಣಪ್ಪ (ಕೇಳಿಕೆ ಕಲಾವಿದ), ಅರುಣ್ ಕುಮಾರ್ (ಯೋಧ, ಭಾರತೀಯ ಸೇನೆ) ಅವರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಶೋದಮ್ಮ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಅಗಜಾನನಮೂರ್ತಿ, ಕಸಾಪ ಕಾರ್ಯದರ್ಶಿಗಳಾದ ಎಸ್.ಸತೀಶ್, ಚಾಂದ್ ಪಾಷ, ಕೋಶಾಧ್ಯಕ್ಷ ಸುಧೀರ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಶಂಕರ್, ಪ್ರಭು, ಆಂಜಿ, ನಾರಾಯಣಸ್ವಾಮಿ, ಶ್ರೀಕಾಂತ್, ಕೃಷ್ಣ ಹಾಜರಿದ್ದರು.
- Advertisement -
- Advertisement -
- Advertisement -