ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಕುಡಿಯುವ ನೀರು ಪೂರೈಸಲು ಮಾತ್ರ ಬಳಸಲು ಸೂಚಿಸಿದ್ದರೂ ಅದಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಕಾರ್ಯಗಳಿಗೆ ಬಳಸುತ್ತಿರುವ ದೂರು ಬಂದಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಬರುವ ೧೪ ನೇ ಹಣಕಾಸು ಯೋಜನೆಯ ಅನುದಾನವನ್ನು ಕುಡಿಯುವ ನೀರು ಪೂರೈಸಲು ಮಾತ್ರ ಬಳಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದ್ದೆವು. ಕುಡಿಯುವ ನೀರಿಗೆ ಮೊದಲ ಆದ್ಯತೆಯಿರಲಿ.
ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವವರಿಗೆ ತಿಂಗಳುಗಳಗಟ್ಟಲೇ ಹಣ ಸಂದಾಯ ಮಾಡದೇ ಇದ್ದರೆ ನೀರು ಪೂರೈಸಲು ತೊಂದರೆಯಾಗುತ್ತದೆ ಹಾಗಾಗಿ ಅವರಿಗೆ ವಾರಕ್ಕೊಮ್ಮೆ ಹಣ ಸಂದಾಯ ಮಾಡಲು ಕ್ರಮ ಜರುಗಿಸುವಂತೆ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ೨೦ ಮಂದಿ ಶುಶ್ರೂಷಕಿಯರ ಅಗತ್ಯವಿದ್ದು ಕೇವಲ ೯ ಮಂದಿ ಮಾತ್ರ ಇದ್ದಾರೆ. ಹಾಗಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಆಸ್ಪತ್ರೆಯಲ್ಲಿರುವ ಶುಶ್ರೂಷಕಿಯರ ಕೊರತೆ ತೀರಿಸಲು ಕ್ರಮ ಜರುಗಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಅನಸೂಯಮ್ಮ ಮಾತನಾಡಿ ತಾಲ್ಲೂಕಿನಾದ್ಯಂತ ಬಹುತೇಕ ವಾಲ್ಮೀಕಿ ಭವನ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಮುಗಿದಿದೆಯಾದರೂ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಿರ್ಮಾಣ ಮಾಡಲು ಈವರೆಗೂ ನಿವೇಶನ ಮಂಜೂರು ಮಾಡಿಲ್ಲ. ಈ ಬಗ್ಗೆ ಹಲವಾರು ಭಾರಿ ಮನವಿ ಸಲ್ಲಿಸಲಾಗಿದೆಯಾದರೂ ಗ್ರಾಮ ಪಂಚಾಯಿತಿಯಿಂದ ನಿವೇಶನ ಲಭ್ಯವಿಲ್ಲದೇ ಇರುವುದರಿಂದ ಇದೀಗ ಕಂದಾಯ ಇಲಾಖೆಗೆ ನಿವೇಶನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಕೃಷಿ ಇಲಾಖೆಯ ಅವ್ಯವಸ್ಥೆಗಳ ಬಗ್ಗೆ ಸದಸ್ಯರು ಆರೋಪ ಮಾಡಿದಾಗ ತಾಲ್ಲೂಕಿನಾದ್ಯಂತ ಇರುವ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ರಸಗೊಬ್ಬರದ ದರ ಪಟ್ಟಿ ಹಾಕಿರುವುದಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳೂ ಅಂಗಡಿ ಮಾಲೀಕರಿಗೆ ನೋಟೀಸ್ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ, ಇಓ ಎಂ.ವೆಂಕಟೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -