ಬಯಲುಸೀಮೆ ಪ್ರದೇಶವಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತ್ವರಿತಗತಿಯಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರಕಾರದ ಮೇಲೆ ಎರಡೂ ಜಿಲ್ಲೆಗಳ ಶಾಸಕರು ಒಟ್ಟಾಗಿ ಒತ್ತಾಯ ಮಾಡುವುದಾಗಿ ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಲೂಡು, ಚಾಗೆ, ಶೆಟ್ಟಿಹಳ್ಳಿ ಹಾಗು ಜಯಂತಿಗ್ರಾಮಗಳಲ್ಲಿ ಸುಮಾರು 72 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕುಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿದ್ದು, ಜನ, ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ರಾಜ್ಯ ಸರಕಾರ ಎರಡೂ ಜಿಲ್ಲೆಗಳಿಗೆ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಲ್ಪಿಸಬೇಕೆಂದರು.
ಸರ್ಕಾರದ ಅನುಧಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿಗಳನ್ನು ನಡೆಸಿ ಜನತೆಗೆ ಶುಧ್ದ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿವಹಿಸಿ ಕೆಲಸ ಮಾಡಬೇಕು ಎಂದರು.
ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆಯಲ್ಲಿ ಜಯಂತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಅಬ್ಲೂಡು ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಶಾಲೆಯ ವಿಧ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್ ಉದ್ಘಾಟನೆ ನೆರವೇರಿಸಿದ ಅವರು ಶಾಲೆ ಹಾಗು ಶಾಲೆಯ ಮಕ್ಕಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಅವರು ಶಿಕ್ಷಕರನ್ನುದ್ದೇಶಿಸಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮುಖಾಂತರ ಮುಂದಿನ ಪರೀಕ್ಷೆಯಲ್ಲಿ ಉತ್ತಮವಾದ ಶ್ರೇಣಿಯಲ್ಲಿ ಫಲಿತಾಂಶವನ್ನು ತಂದುಕೊಟ್ಟು ತಾಲ್ಲೂಕಿಗೆ ಹೆಸರುಗಳಿಸಿಕೊಡಬೇಕು ಎಂದರು.
ಸಾರ್ ನಾವು 8ನೇ ತರಗತಿಯಲ್ಲಿ ಓದುತ್ತಿದ್ದು ಈವರೆಗೂ ನಮಗೆ ಉಚಿತ ಸೈಕಲ್ ವಿತರಣೆಯಾಗಿಲ್ಲ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಶಾಸಕ ಎಂ.ರಾಜಣ್ಣ ಕೂಡಲೇ ಈ ಬಗ್ಗೆ ಇಆಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸೈಕಲ್ ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇನ್ನು ಶಾಲೆಯ ಸುತ್ತಲೂ ಇರುವ ಮೈಧಾನವನ್ನು ಸಮತಟ್ಟು ಮಾಡಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಮಾಡಲೂ ಈಗಾಗಲೇ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರ ಅನುಧಾನದಲ್ಲಿ 4 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರವಾಗಿ ಮೈದಾನದ ಕೆಲಸವನ್ನು ಪ್ರಾರಂಭ ಮಾಡಲಾಗುತ್ತದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್‍ಮುನಿಯಪ್ಪ, ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ನಾರಾಯಣಸ್ವಾಮಿ, ಸದಸ್ಯ ರಮೇಶ್, ಮಾಜಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಮುಖಂಡರಾದ ಮುನಿವೆಂಕಟಸ್ವಾಮಿ, ಶೆಟ್ಟಿಹಳ್ಳಿಮಂಜುನಾಥ್, ಗುಡಿಹಳ್ಳಿ ಬಚ್ಚರಾಯಪ್ಪ, ಜಯಂತಿಗ್ರಾಮದ ಬೈರೇಗೌಡ, ಕೆಂಪನಹಳ್ಳಿ ಮುನಿರೆಡ್ಡಿ, ಕೆ.ಎಸ್.ದ್ಯಾವಕೃಷ್ಣ, ತಾತಹಳ್ಳಿ ಚಲಪತಿ, ಕೊಂಡಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಯಶ್ರೀ, ಶಶಿಕುಮಾರ್, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -