ಚೀನಾದಿಂದ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ ನಮಗೆ ಅಗತ್ಯವಿರುವಷ್ಟು ರೇಷ್ಮೆ ನೂಲನ್ನು ನಮ್ಮ ದೇಶದಲ್ಲಿಯೇ ತಯಾರಿಸಲು ಬೇಕಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿ ಹಾಗು ರೇಷ್ಮೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರೇಷ್ಮೆ ಗುಣಮಟ್ಟದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ಹೊರತುಪಡಿಸಿದಂತೆ ದೇಶದ ಬಹುತೇಕ ಕಡೆ ಉತ್ತಮ ಗುಣಮಟ್ಟದ ರೇಷ್ಮೆ ನೂಲು ಉತ್ಪಾದನೆಯಾಗುತ್ತಿಲ್ಲ. ಹಾಗಾಗಿ ಚೀನಾದಿಂದ ರೇಷ್ಮೆ ನೂಲು ಆಮದು ಮಾಡಿಕೊಳ್ಳಲಾಗುತ್ತಿದೆ. ನಮಗೆ ಅಗತ್ಯವಿರುವಷ್ಟು ರೇಷ್ಮೆ ನೂಲು ಇಲ್ಲೇ ಉತ್ಪಾದನೆಯಾದರೆ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆ ನೂಲನ್ನು ನಿಲ್ಲಿಸಬಹುದು. ಅದಕ್ಕಾಗಿ ರೈತರು ಹಾಗು ರೀಲರ್‌ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನವುಳ್ಳ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು.
ಬಯಲುಸೀಮೆ ಭಾಗದ ಜನತೆ ಕೃಷಿ ಹಾಗು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದು, ಈ ಭಾಗದ ರೈತರು ಹಿಪ್ಪುನೇರಳೆಯನ್ನು ಮರಗಡ್ಡಿಯಾಗಿ ಬೆಳೆಸಲು ಮುಂದಾಗುವುದರಿಂದ ನೀರಿನ ಕೊರತೆ ಸ್ವಲ್ಪಮಟ್ಟಿಗೆ ನೀಗುತ್ತದೆ. ಉತ್ತಮ ಗುಣಮಟ್ಟದ ಸೊಪ್ಪು ಇದರಿಂದ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೈತರು, ರೀಲರ್‌ಗಳು, ನೇಕಾರರು ಹಾಗು ಹುರಿಗಾರರು ತಮ್ಮ ತಮ್ಮ ಉದ್ದಿಮೆಯಲ್ಲಿರುವ ಸಮಸ್ಯೆ ಹೇಳಿಕೊಂಡರು.
ಎಲ್ಲರ ಸಮಸ್ಯೆ ಆಲಿಸಿದ ಅಧ್ಯಕ್ಷರು, ರೈತರು, ರೀಲರ್‌ಗಳು ಸೇರಿದಂತೆ ನೇಕಾರರು ಹಾಗು ಹುರಿಗಾರರು ಕೇಂದ್ರ ರೇಷ್ಮೆ ಮಂಡಳಿ ಕಚೇರಿಗೆ ಒಂದೊಂದು ತಂಡ ರಚಿಸಿಕೊಂಡು ಬಂದರೆ ಅಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಕೆ.ಎನ್.ಮಹೇಶ್, ಜಿಲ್ಲಾ ಪಂಚಾಯ್ತಿ ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಮಾರುಕಟ್ಟೆಯ ಪ್ರಭು, ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -