ದೇಶ ದೊಡ್ಡದು, ರಾಜಕೀಯವಲ್ಲ. ನಮ್ಮ ದೇಶ ಮೋದಿಯವರ ನೇತೃತ್ವದಲ್ಲಿ ಸುಭದ್ರವಾಗಿದೆ. ಶ್ರದ್ಧೆಯಿಂದ ಆಡಳಿತ ನಡೆಸಿ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ, ಉತ್ತಮ ಆಡಳಿತ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಸಹವಕ್ತಾರ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಪಡೆಯುವುದು ನಿಶ್ಚಯ. ಸತತವಾಗಿ ೭ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯಿಂದ ಕ್ಷೇತ್ರದ ಅಭಿವೃದ್ಧಿಯ ಬದಲಿಗೆ ಅವರ ವೈಯಕ್ತಿಕ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಅವರ ದುರಾಡಳಿತದಿಂದ ಬೇಸತ್ತಿರುವ ಜನರು ಬದಲಾವಣೆಯನ್ನು ಬಯಸಿದ್ದಾರೆ. ನಾವೆಲ್ಲರೂ ಸಾಮೂಹಿಕ ಸಂಘಟನೆಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸಮರ್ಥವಾಗಿ ಎದುರಿಸಲಿಕ್ಕೆ ಕೇಂದ್ರ ಸರ್ಕಾರ ಸಮರ್ಥವಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಮ್ಮ ದೇಶದ ಸೈನಿಕರ ಸಮರ್ಥವಾಗಿ ಪಾಕಿಸ್ತಾನಕ್ಕೆ ಉತ್ತರಿಸಿದ್ದಾರೆ. ಪಾಕಿಸ್ತಾನವನ್ನು ಇತರ ದೇಶಗಳು ಬೆಂಬಲಿಸದಂತೆ ಪ್ರಧಾನಿ ಮೋದಿಯವರು ಎಲ್ಲಾ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಂಬಲವನ್ನು ಗಳಿಸಿ ಪ್ರೀತಿಯ ಬೇಲಿ ಹಾಕಿಬಿಟ್ಟಿದ್ದಾರೆ.
ಈ ಹಿಂದೆ ಮುಂಬೈ ದಾಳಿ ಸೇರಿದಂತೆ ಹಲವಾರು ಬಾರಿ ಉಗ್ರರು ಮಾಡಿರುವ ದಾಳಿಗಳ ಸಮಯಗಳಲ್ಲಿ ಅಂದಿನ ಸರ್ಕಾರಗಳು ಕಠಿಣವಾದ ನಿರ್ಧಾರಗಳನ್ನು ಕೈಗೊಂಡಿದ್ದಿದ್ದರೆ, ಇಂದು ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಟೀಕಿಸುವವರು ಭಯೋತ್ಪಾದನೆ ಹೆಚ್ಚಲು ಯಾರು ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಚುನಾವಣೆ ಸಮೀಪದಲ್ಲಿರುವ ಸಮಯದಲ್ಲೆ ನಮ್ಮ ಸಹನೆಯನ್ನು ಕೆಣಕುವಂತಹ ಪ್ರಯತ್ನಗಳಾಗುತ್ತಿವೆ. ನಮ್ಮೆಲ್ಲರ ಆದ್ಯತೆ ದೇಶವಾಗಬೇಕು. ದೇಶ ಉಳಿದರೆ ಮಾತ್ರವೇ ರಾಜಕೀಯ ಪಕ್ಷಗಳು ಉಳಿಯುತ್ತವೆ. ಆದ್ದರಿಂದ ರಾಜಕೀಯ ಬಿಟ್ಟು ಎಲ್ಲಾ ಪಕ್ಷಗಳು ದೇಶದ ವಿಚಾರದಲ್ಲಿ ಒಂದಾಗಬೇಕು ಎಂದರು.
ಬಿಜೆಪಿ ಮುಖಂಡ ಎಸ್.ಬಿ. ಮುನಿವೆಂಕಟಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಜನಪರವಾದ ಯೋಜನೆಗಳು ನಮಗೆ ಶ್ರೀ ರಕ್ಷೆಯಾಗಲಿವೆ. ಪಕ್ಷದ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಮನೆ ಮನೆಗೂ ಯೋಜನೆಗಳ ಕುರಿತು ತಲುಪಿಸಬೇಕಾಗಿದೆ. ಈಗಾಗಲೇ ಕಮಲ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಆರಂಭವಾಗಿದೆ. ಪ್ರಧಾನಿ ಮೋದಿಯವರು ೧೫ ಕೋಟಿ ಕಾರ್ಯಕರ್ತರೊಂದಿಗೆ ಏಕಕಾಲದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದಿಸಲಿದ್ದಾರೆ. ಜನರಿಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ತಿಳಿಸಲು ಬೈಕ್ ರಾಲಿ ನಡೆಸಲಿದ್ದೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, , ದಾಮೋದರ್, ಸುಜಾತಮ್ಮ, ಮಂಜುಳಮ್ಮ ಹಾಜರಿದ್ದರು.
- Advertisement -
- Advertisement -
- Advertisement -







