ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಬೇಕು ಇಲ್ಲವಾದಲ್ಲಿ ಈ ಹಿಂದಿನಂತೆ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು ಎಂದು ಒತ್ತಾಯಿಸಿ ನಾರಾಯಣದಾಸರಹಳ್ಳಿ ಗ್ರಾಮಸ್ಥರು ಚೀಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೀರಿನ ತೊಂದರೆಯಿದ್ದು ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು.
ಆದರೆ ಇದೀಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ರಾಜಕೀಯ ಕುತಂತ್ರದಿಂದ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದ ಖಾಸಗಿ ಕೊಳವೆಬಾವಿ ಹಾಗು ಟ್ಯಾಂಕರ್ ನೀರನ್ನು ನಿಲ್ಲಿಸಿದ್ದು ಜನರು ಸೇರಿದಂತೆ ದನಕರುಗಳು ಪರದಾಡುವಂತಾಗಿದೆ. ಕಳೆದ ೧೫ ದಿನಗಳಿಂದ ಗ್ರಾಮಕ್ಕೆ ಒಂದು ಹನಿ ನೀರು ಪೂರೈಸದ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಸಾಕಷ್ಟು ಭಾರಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಗಮನಕ್ಕೆ ತಂದಿದ್ದೇವಾದರೂ ಪಿಡಿಓ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಂದು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲು ಗ್ರಾಮಸ್ಥರೆಲ್ಲಾ ಬಂದರೆ ಪಿಡಿಓ ಸೇರಿದಂತೆ ಜಲಗಾರರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿರದೇ ಉದ್ದೇಶಪೂರ್ವಕವಾಗಿ ಹೊರಗಡೆ ಹೋಗಿದ್ದಾರೆ. ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ನೀರು ಪೂರೈಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಿನಾರಾಯಣ, ಗ್ರಾಮಸ್ಥರಾದ ಮುನಿರಾಜು, ಮಂಜುನಾಥ್, ವೆಂಕಟಪ್ಪ, ನಾರಾಯಣಪ್ಪ, ಚಿಕ್ಕಮುನಿಯಪ್ಪ, ನಾಗರತ್ನಮ್ಮ, ಶಾಂತಮ್ಮ ಹಾಜರಿದ್ದರು.
- Advertisement -
- Advertisement -
- Advertisement -