ತಾಲೂಕಿನಾಧ್ಯಂತ ಕುರಿ ಮತ್ತು ಮೇಕೆಗಳಿಗೆ ತಗುಲಿರುವ ನೀಲಿನಾಲಿಗೆ ರೋಗ ನಿವಾರಣೆಗೆ ಕುರಿ ಸಾಕಾಣಿಕೆದಾರರು ಕುರಿ ಕೊಟ್ಟಿಗೆಯನ್ನು ಸ್ವಚ್ಚವಾಗಿಟ್ಟು ಕೊಳ್ಳುವುದರೊಂದಿಗೆ ಕೀಟ ಮತ್ತು ಸೊಳ್ಳೆಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಕೃಷಿ ನಿರ್ದೇಶಕ ಡಾ.ಬೈರೇಗೌಡ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಕುರಿ ಸಾಕಾಣಿಕೆದಾರರಿಗೆ ಕುರಿ ಮತ್ತು ಮೇಕೆಗಳಿಗೆ ತಗುಲಿರುವ ನೀಲಿ ನಾಲಿಗೆ ರೋಗ ಹಾಗು ಅದರ ನಿವಾರಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಯಪಡಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ನವೆಂಬರ್ ತಿಂಗಳಿನಲ್ಲಿ ತಾಲ್ಲೂಕಿನಾದ್ಯಂತ ಬಿದ್ದ ಜಡಿ ಮಳೆಯಿಂದ ನಿಂತಿರುವ ನೀರಿನಲ್ಲಿ ಉತ್ಪಾದನೆಯಾಗುವ ಕೀಟ (ವೈರಸ್) ಗಳಿಂದ ಕುರಿ ಮತ್ತು ಮೇಕೆಗಳಿಗೆ ನೀಲಿ ನಾಲಿಗೆ ಹರಡುತ್ತಿದೆ. ನೀಲಿ ನಾಲಿಗೆ ರೋಗ ಲಕ್ಷಣಗಳೆಂದರೆ ಜ್ವರ ಬರುವುದು, ಬಾಯಿಯಿಂದ ಜೊಲ್ಲು ಸುರಿಸುವುದು, ಬಾಯಿ ಮೂಗಿನ ಪದರವೆಲ್ಲಾ ಕೆಂಪಾಗಿ ಒಸಡುಗಳು ಊದಿಕೊಳ್ಳುವುದು ಸೇರಿದಂತೆ ಭೇದಿ ಮತ್ತು ಆಮಶಂಕೆ, ಕುಂಟುವಿಕೆ ಕಾಣಿಸುತ್ತದೆ.
ಯಾವುದೇ ನಿರ್ದಿಷ್ಠ ಚಿಕಿತ್ಸೆಯಿಲ್ಲದ ಈ ರೋಗಕ್ಕೆ ಕುರಿಗಳ ದೇಹದ ಮೇಲೆ ಕಾಣಿಸುವ ಹುಣ್ಣುಗಳನ್ನು ಕ್ರಿಮಿನಾಶಕ ದ್ರಾವಣದಿಂದ ಸ್ವಚ್ಚಗೊಳಿಸುವುದು ಸೇರಿದಂತೆ ಸಾಯಂಕಾಲದ ವೇಳೆಯಲ್ಲಿ ಕೊಟ್ಟಿಗೆಯ ಸುತ್ತಲೂ ಬೇವಿನ ಹೊಗೆ ಹಾಕಬೇಕು ಹಾಗೂ ಕೊಟ್ಟಿಗೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ರೋಗದಿಂದ ಕುರಿ ಹಾಗು ಮೇಕೆಗಳ ಸಾವು ಸಂಭವಿಸುವುದು ಕಡಿಮೆಯಾದರೂ ಗರ್ಭಪಾತ ಹೆಚ್ಚಾಗಿ ಆಗುತ್ತದೆ. ನೀಲಿ ನಾಲಿಗೆ ಸೋಂಕಿತ ಕುರಿಗಳನ್ನು ಆರೋಗ್ಯವಂತ ಕುರಿಗಳ ಗುಂಪಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಸಾಕಬೇಕು ಎಂದರು.
ಪ್ರಗತಿಪರ ಕುರಿಸಾಕಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ಗೌಡ ಮಾತನಾಡಿ, ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸುವ ನೀಲಿನಾಲಿಗೆ ರೋಗವು ನಿಂತ ನೀರಿನಿಂದ ಉತ್ಪಾದನೆಯಾಗುವ ನೊಣದಿಂದ ಹರಡುವುದರಿಂದ ಕೊಟ್ಟಿಗೆ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ರೋಗ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಜಂಟಿ ನಿರ್ದೇಶಕಿ ಡಾ.ಶೋಭಾರಾಣಿ, ಡಾ.ರಂಗನಾಥ್, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -