ನಗರದ ಟಿ.ಬಿ.ರಸ್ತೆಯಲ್ಲಿ ಓಟಿ ವೃತ್ತದ ಸಮೀಪ ಪುಟ್ಟ ಕಬ್ಬಿಣದ ಚಪ್ಪಲಿ ಹೊಲೆಯುವ ರಾಮಯ್ಯನ ಪೆಟ್ಟಿ ಅಂಗಡಿಯಿದೆ. ಚಪ್ಪಲಿ ರಿಪೇರಿಗೆ ಬರುವವರಿಗೆ ಹಾಗೂ ಈ ಹಾದಿಯಲ್ಲಿ ಸಾಗುವವರಿಗೆ ಸದ್ದಿಲ್ಲದೆ ರಾಮಯ್ಯ ಪರಿಸರ ಪಾಠವನ್ನು ಮಾಡುತ್ತಿದ್ದಾರೆ.
ತನ್ನ ಪೆಟ್ಟಿ ಅಂಗಡಿಗೆಗೆ ಕುಂಬಳ ಬಳ್ಳಿಯನ್ನು ಹಬ್ಬಿಸಿರುವ ರಾಮಯ್ಯ, ಬಿಸಿಲಲ್ಲಿ ಬರುವ ಗ್ರಾಹಕರು ದಣಿವಾರಿಸಿಕೊಳ್ಳಬಹುದಾಗುವಂತೆ ಚಪ್ಪರ ಹಬ್ಬಿಸಿದ್ದಾರೆ. ಚಿಕ್ಕ ಕಲ್ಲುಬೆಂಚನ್ನು ಸಹ ಹಾಕಿರುವುದರಿಂದ ದಾರಿಯಲ್ಲಿ ಸಾಗುವವರು ಬಿಸಿಲಿಗೆ ದಣಿವಾದಲ್ಲಿ ಕುಳಿತು ಹಸಿರು ಚಪ್ಪರವನ್ನು ಬೆಳೆಸಿದ್ದಕ್ಕಾಗಿ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುತ್ತಾರೆ.
ಸುಮಾರು 50 ವರ್ಷಗಳಿಂದ ಚಮ್ಮಾರಿಕೆಯ ಕೆಲಸದಲ್ಲಿ ತೊಡಗಿರುವ 75 ವರ್ಷಗಳ ವೃದ್ಧ ರಾಮಯ್ಯ, ಈ ಹಿಂದೆ ನಗರದ ಹೂ ವೃತ್ತದಲ್ಲಿ ಅಂಗಡಿಯಿಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ಟಿ.ಬಿ.ರಸ್ತೆಗೆ ಬಂದಿದ್ದಾರೆ. ಕೆಲವು ತಿಂಗಳ ಹಿಂದೆ ಬಿಸಿಲಿನ ಝಳ ಹೆಚ್ಚಾದಾಗ ಕುಂಬಳ ಬೀಜವನ್ನು ತಂದು ನೆಟ್ಟಿದ್ದಾರೆ. ಅದು ಹಬ್ಬಿ ಪೆಟ್ಟಿ ಅಂಗಡಿಯನ್ನು ಆವರಿಸಿ ತಂಪಾದ ನೆರಳನ್ನು ನೀಡುತ್ತಿದೆ.
‘ಹಸಿರು ನಮ್ಮನ್ನು ಸದಾ ಕಾಪಾಡುತ್ತದೆ’ ಎನ್ನುವ ರಾಮಯ್ಯ, ಬಿಸಿಲಿನಲ್ಲಿ ಕಬ್ಬಿಣದ ಡಬ್ಬ ಕಾವು ಏರಿ ಕುಳಿತುಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಕುಂಬಳ ಬಳ್ಳಿ ಹಬ್ಬಿಸಿದೆ. ಈಗ ಎಷ್ಟೇ ಬಿಸಿಲಿದ್ದರೂ ತಂಪಾಗಿರುತ್ತದೆ. ಬಂದವರೆಲ್ಲ ಮೆಚ್ಚುತ್ತಾ ನೆರಳಿನಲ್ಲಿ ಆಯಾಸ ಪರಿಹರಿಸಿಕೊಂಡು ಹೋಗುತ್ತಾರೆ’ ಎಂದು ಹೇಳಿದರು.
‘ಹಿಂದೆ ಬಸವಣ್ಣನವರ ಕಾಲದಲ್ಲಿದ್ದ ಚಮ್ಮಾರ ಹರಳಯ್ಯ ಭಕ್ತಿಯ ಪಾಠವನ್ನು ಕಲಿಸಿದ್ದರೆ, ಪುಟ್ಟ ಗೂಡಂಗಡಿಯನ್ನಿಟ್ಟುಕೊಂಡು ಸ್ವಾಭಿಮಾನಿಯಾಗಿರುವ ರಾಮಯ್ಯ ನಮಗೆಲ್ಲಾ ಪರಿಸರ ಪಾಠವನ್ನು ಕಲಿಸುತ್ತಾ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಬಾಬು ಮೆಡಿಕಲ್ಸ್ ನ ಬಾಬು.
- Advertisement -
- Advertisement -
- Advertisement -