ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಪಿ.ಜಿ ಕೋರ್ಸ್ ವಾಪಸಾತಿಗೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿದರು.
ಹಲವು ವರ್ಷಗಳ ಬೇಡಿಕೆಯ ಫಲವಾಗಿ ಸರ್ಕಾರ ಶಿಡ್ಲಘಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪಿ.ಜಿ ಕೋರ್ಸ್ ಮಂಜೂರಾಗಿದೆ. ಆದರೆ ಮೂಲಭೂತ ಸೌಕರ್ಯದ ನೆಪವೊಡ್ಡಿ ಪ್ರಾಂಶುಪಾಲರು ಮತ್ತು ವಾಣಿಜ್ಯ ವಿಭಾಗದವರು ಅದನ್ನು ವಾಪಸಾತಿಗೆ ಬರೆದಿದ್ದಾರೆ. ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವುದನ್ನು ತಡೆಹಿಡಿಯುವುದು ಅನ್ಯಾಯ. ಕೊರತೆಯಿದ್ದಲ್ಲಿ ಅದನ್ನು ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಶಾಸಕರ ಮುಂದಿಟ್ಟು ಬಗೆಹರಿಸಿಕೊಳ್ಳಬಹುದು. ತಕ್ಷಣ ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯನ್ನು ಕರೆಯಬೇಕು. ಅಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಅನಿರ್ಧಿಷ್ಟ ಕಾಲ ಪ್ರತಿಭಟಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
‘ಪಿ.ಜಿ ಕೋರ್ಸ್ಗೆ ಪಾಠ ಮಾಡಲು ಪಿ.ಎಚ್.ಡಿ ಮಾಡಿರುವ ಪ್ರಾಧ್ಯಾಪಕರ ಅಗತ್ಯವಿದೆ. ಸುಸಜ್ಜಿತ ಕೊಠಡಿಗಳು, ವಾಚನಾಲಯದ ಅಗತ್ಯವಿದೆ. ನಾವು ವಾಪಸಾತಿಗೆ ಬರೆದಿಲ್ಲ. ಪೂರಕ ಕಾರ್ಯಗಳು ನಡೆಯುವವರೆಗೂ ಹಾಗೂ ಸೂಕ್ತ ಪ್ರಾಧ್ಯಾಪಕರನ್ನು ಕಾಲೇಜಿಗೆ ನೇಮಕ ಮಾಡುವವರೆಗೆ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಯೂನಿವರ್ಸಿಟಿಗೆ ಪತ್ರ ಬರೆದಿದ್ದೇವೆ’ ಎಂದು ಪ್ರಾಂಶುಪಾಲ ಚಂದ್ರಾನಾಯಕ್ ತಿಳಿಸಿದರು.
ವಿದ್ಯಾರ್ಥಿಗಳು ಮನವಿಪತ್ರವನ್ನು ಪ್ರಾಂಶುಪಾಲ ಚಂದ್ರಾನಾಯಕ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಮಚಂದ್ರಪ್ಪ ಅವರಿಗೆ ಸಲ್ಲಿಸಿದರು. ಡಿ.ವೈ.ಎಫ್.ಐ ರಾಜ್ಯ ಮುಖಂಡ ಮುನೀಂದ್ರ, ಮುಜಾಹಿದ್ಪಾಷ, ರವಿ, ವೆಂಕಟೇಶ, ಲಕ್ಷ್ಮೀನಾರಾಯಣ, ಸಪ್ನ, ಶ್ವೇತ, ಮಮತ, ಸುಪ್ರಿಯಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -