ಉತ್ತಮ ವಿದ್ಯೆಗಿಂತ ಅಮೂಲ್ಯ ವಸ್ತುವು ಯಾವುದೂ ಇಲ್ಲ. ನಾವು ಜೀವಂತವಿರುವವರೆಗೂ ನಮ್ಮಲ್ಲಿನ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಪ್ರತಿಯೊಂದು ಮಗುವೂ ವಿದ್ಯಾವಂತರಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ದಿಬ್ಬೂರಹಳ್ಳಿ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು, ಕಡು ಬಡವರು, ಹಿಂದುಳಿದವರು ಬೇಧ ಭಾವವಿಲ್ಲದೆ ವಿದ್ಯೆಯನ್ನು ಪಡೆಯಬೇಕು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂಬ ಉದ್ದೇಶದಿಂದ ತಾಲ್ಲೂಕಿನ ಉತ್ತರ ಭಾಗದಲ್ಲಿ ಸುಸಜ್ಜಿತ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಕಟ್ಟಿಸಲಾಗಿದೆ. ಶಿಕ್ಷಕರು ಹಾಗೂ ಅಧಿಕಾರಿಗಳು ಸೂಕ್ತವಾಗಿ ನಿರ್ವಹಣೆ ಮಾಡುವುದರೊಂದಿಗೆ ಮಕ್ಕಳಲ್ಲಿ ಶಿಸ್ತನ್ನು ರೂಢಿಸಬೇಕು ಎಂದು ಹೇಳಿದರು.
ಈ ಭಾಗದ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಮಕ್ಕಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಬೇಕು. ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಮಕ್ಕಳಿಗೆ ನೀಡುವ ಆಹಾರ, ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು. ಅದರೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಯತ್ತಲೂ ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುವ ವಿದ್ಯಾರ್ಥಿನಿಲಯಗಳಲ್ಲಿ ನಿರ್ವಹಣೆಯು ಗುಣಮಟ್ಟದ್ದಾಗಿರಲಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ದೂರು ಬರದಂತೆ ಮಕ್ಕಳಿಗೆ ಒಳ್ಳೆಯ ಆಹಾರವನ್ನು ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಗಣ್ಯರು ವಿದ್ಯಾರ್ಥಿ ನಿಲಯದ ಗ್ರಂಥಾಲಯ, ಮಲಗುವ ಕೋಣೆಗಳು, ಶೌಚಾಲಯ ಅಡುಗೆ ಕೋಣೆ ಮುಂತಾದವುಗಳನ್ನು ಪರಿವೀಕ್ಷಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಡಾ.ಎ.ಎಂ. ಜಯರಾಮರೆಡ್ಡಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ವಿ. ನಾರಾಯಣಸ್ವಾಮಿ, ಬಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎನ್.ಪುಷ್ಪ ಗಂಗಾಧರ, ಉಪಾಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಸದಸ್ಯ ವೆಂಕಟರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅನುಸೂಯಾದೇವಿ, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಆನೆಮಡುಗು ಮುರಳಿ, ತಿಮ್ಮಯ್ಯ, ಮುನಿಯಪ್ಪ, ತಾದೂರು ರಮೇಶ್, ಡಿ.ವಿ.ವೆಂಕಟೇಶ್, ಕುಂಬಿಗಾನಹಳ್ಳಿ ರವಿ, ರಾಮ್ಬಾಬು, ರಘುನಾಥರೆಡ್ಡಿ, ಹರಿಪ್ರಸಾದ್, ದೇವರಾಜ್, ಕನಕಪ್ರಸಾದ್, ದ್ಯಾವಪ್ಪ, ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -