ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಶೈಕ್ಷಣಿಕ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿದರು.
ಪ್ರತಿಯೊಬ್ಬರೂ ತಾವು ಮಾಡುವ ಕಾರ್ಯದಲ್ಲಿ, ಅವಲಂಬಿಸಿರುವ ವೃತ್ತಿಯ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಿರಬೇಕು. ವೃತ್ತಿಯನ್ನು ಸೇವೆಯೆಂದು ಪರಿಭಾವಿಸಬೇಕು ಎಂದು ಅವರು ತಿಳಿಸಿದರು.
ಆಜನ್ಮದತ್ತವಾಗಿ ಅಡಗಿರುವ ಅದಮ್ಯವಾದ ಬುದ್ಧಿ, ಬಲ, ಉತ್ಸಾಹವನ್ನು ಕ್ರಿಯಾತ್ಮಕ ಮತ್ತು ರಚನಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಶಿಕ್ಷಕರಿಗೆ ವಾರ್ಷಿಕವಾಗಿ ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸಿಕೊಳ್ಳಲು ದಿನದರ್ಶಿಕೆ ಸಹಕಾರಿಯಾಗಲಿದೆ ಎಂದರು.
ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದು, ಅದಕ್ಕಾಗಿ ಎಲ್ಲಾ ಶಾಲೆಗಳಲ್ಲಿಯೂ ಸಾಕಷ್ಟು ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾ ಅವಧಿಪೂರ್ವ ಮತ್ತು ನಂತರದಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಕನಿಷ್ಟ ಉತ್ತೀರ್ಣರಾಗಲು ಬೇಕಾದಷ್ಟನ್ನಾದರೂ ಅಂಕಗಳನ್ನು ಗಳಿಸಲು ಈಗಾಗಲೇ ಎಲ್ಲಾ ವಿಷಯಗಳಲ್ಲಿಯೂ ಪಾಸಿಂಗ್ ಪ್ಯಾಕೇಜ್ ರಚಿಸಿಕೊಂಡು ಕಲಿಸಲಾಗುತ್ತಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಪ್ರೌಢಶಾಲೆಗಳಲ್ಲಿ ಶಿಕ್ಷಕರು ಫಲಿತಾಂಶಗಳಿಕೆಯ ದೃಷ್ಟಿಯಿಂದ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮಕ್ಕಳ ಮನೆ ಭೇಟಿ, ಪರಿಹಾರ ಭೋಧನೆ, ವಿಶೇಷ ತರಗತಿಗಳಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಂಪೂರ್ಣವಾಗಿ ಸಿದ್ಧಗೊಳಿಸಲಾಗುವುದು ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು ರಾಜ್ಯಪರಿಷತ್ ಸದಸ್ಯ ಸುಬ್ಬಾರೆಡ್ಡಿ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಖಜಾಂಚಿ ಅಶ್ರಥ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರವೀಂದ್ರನಾಥ್ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -