ಬಿಜಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಸ್ವಸ್ತಿ ವಿಜಯ ಹಾಗೂ ಶಾರದಾ ಪೂಜೆ ಕಾರ್ಯಕ್ರಮ

0
501

ಶಿಕ್ಷಕರ ಮಾರ್ಗದರ್ಶನ, ಪೋಷಕರ ಕಾಳಜಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ತಿಳಿಸಿದರು.
ಹನುಮಂತಪುರ ಗೇಟ್‌ ಬಳಿಯಿರುವ ಬಿಜಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಸೋಮವಾರ ನಡೆದ ಸ್ವಸ್ತಿ ವಿಜಯ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ ಒತ್ತಾಯಕ್ಕೆ ಮಣಿದು ಓದಿದರೆ ಶಿಕ್ಷಣಕ್ಕೆ ಅರ್ಥವಿಲ್ಲ. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಕಲಿತು ಸಾಧನೆ ಮಾಡಬೇಕು. ಯಾವುದೇ ಕಾರಣಕ್ಕೂ ಮನಸ್ಸು ಚಂಚಲ ಮಾಡಿಕೊಳ್ಳಬಾರದು. ಕೆಟ್ಟ ಆಲೋಚನೆಗಳನ್ನು ಬಿಟ್ಟಾಗ ಜ್ಞಾನ ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಬಿಜಿಎಸ್‌ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್‌.ಶಿವರಾಮರೆಡ್ಡಿ ಮಾತನಾಡಿ, ‘ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಜಗತ್ತು ನಿಂತಿದೆ. ವಿದ್ಯೆ ಇಲ್ಲದೆ ಯಾರೊಬ್ಬರು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯ ದಿದ್ದರೆ ಯಾವೊಂದು ಕೆಲಸಕ್ಕೆ ಹೋದರೂ ಪ್ರಯೋಜನವಿಲ್ಲ. ಪರೀಕ್ಷೆಯಲ್ಲಿ ಪಡೆಯುವ ಒಂದೊಂದು ಅಂಕವೂ ಮಹತ್ವವಾಗಿರುತ್ತದೆ. ಅಂಕಕ್ಕೆ ನಮ್ಮ ಜೀವನವನ್ನೇ ಬದಲಾಯಿಸಿ ಬಿಡುವ ಶಕ್ತಿ ಇದೆ’ ಎಂದು ತಿಳಿಸಿದರು.
ಪ್ರಾಂಶುಪಾಲ ಮಹದೇವಯ್ಯ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು, ಅದನ್ನು ಮೊಟಕುಗೊಳಿಸಬೇಡಿ, ನಿರಂತರವಾಗಿ ಸಾಗಲಿ ಎಂದು ಹೇಳಿದರು.
ಹತ್ತನೇ ತರಗತಿಯ ಪುಷ್ಪ, ಸುಪ್ರಿಯ, ಜೋಷಿತ, ಅಂಜಲಿ, ಜೀವನ್‌ ಮಾತನಾಡಿ, ತಮ್ಮ ಭವಿಷ್ಯದ ಕನಸುಗಳ ಬಗ್ಗೆ, ತಾವು ಕಲಿತ ಶಾಲೆಯ ಪರಿಸರದ ಬಗ್ಗೆ, ಸಿಕ್ಕ ಮಾರ್ಗದರ್ಶನದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!