ಬೆಂಗಳೂರು ಬ್ಲೂ ದ್ರಾಕ್ಷಿಗೆ ಮದ್ಯ ತಯಾರಿಕಾ ಘಟಕಗಳಲ್ಲಿ ಹೆಚ್ಚು ಬೇಡಿಕೆ ಇದ್ದರೂ, ಮಾರುಕಟ್ಟೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ವೈನ್ ಬೋರ್ಡ್ನ ಅಧ್ಯಕ್ಷ ಬಕ್ಕಪ್ಪಕೋಟೆ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ಸಮುದಾಯಭವನದಲ್ಲಿ ಮಂಗಳವಾರ ಜಿಲ್ಲಾ ತೋಟಗಾರಿಕಾ ಇಲಾಖೆ, ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್, ಭಾರತೀಯ ತೋಟಗಾರಿಕಾ ಸಂಸ್ಥೆ, ಅಪೆಡಾ, ದ್ರಾಕ್ಷಾರಸ ಮಂಡಳಿ, ಹಾಗೂ ದ್ರಾಕ್ಷಿ ಬೆಳೆಗಾರರ ಸಂಘಗಳ ಸಹಯೋಗದಲ್ಲಿ ನಡೆದ ಬೆಂಗಳೂರು ಬ್ಲೂ ದ್ರಾಕ್ಷಿ ಅಭಿವೃದ್ಧಿ ಮತ್ತು ಅದರ ಉತ್ಪನ್ನಗಳ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಯುವಂತಹ ಬೆಳೆಗಾರರು ಹೊಸ ಹೊಸ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಳ್ಳಬೇಕು. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವಂತಹ ಬೆಂಗಳೂರು ಬ್ಲೂ ದ್ರಾಕ್ಷಿಯಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ದ್ರಾಕ್ಷಿಯಲ್ಲಿ ಹಲವು ಔಷಧಿಯ ಗುಣಗಳೂ ಕೂಡಾ ಅಡಗಿದೆ. ದ್ರಾಕ್ಷಿಯನ್ನು ಬೆಳೆಯುವಂತಹ ರೈತರುಗಳಿಗೆ ಸೂಕ್ತವಾದ ಬೆಲೆಗಳನ್ನು ನೀಡುವ ಸಲುವಾಗಿ ಮದ್ಯ ತಯಾರಿಕಾ ಘಟಕಗಳೊಂದಿಗೆ ಚರ್ಚೆ ನಡೆಸಿದ್ದು, ಉತ್ತಮವಾದ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸಿಕೊಡುವ ಚಿಂತನೆ ನಡೆಸಲಾಗಿದೆ ಎಂದರು.
ತೋಟಗಾರಿಕಾ ಸಲಹಾ ಕೇಂದ್ರದ ಮಾಜಿ ನಿರ್ದೇಶಕ ಡಾ.ವಸಂತ್ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನ ಜೊತೆಯಲ್ಲಿ ಪೌಷ್ಠಿಕಾಂಶಗಳುಳ್ಳ ಸಂಸ್ಕರಿಸಿದ ದ್ರಾಕ್ಷಿಯ ರಸವನ್ನು ನೀಡಲು ಪ್ರಾರಂಭಿಸಿದಲ್ಲಿ ದ್ರಾಕ್ಷಿ ಬೆಳೆಗಾರರನ್ನು ಉತ್ತೇಜಿಸಿದಂತಾಗುತ್ತದೆ. ದ್ರಾಕ್ಷಿ ಬೆಲೆ ಕುಸಿತಗೊಂಡಾಗ ಕಾಪಿಡಲು ಶಿಥಲೀಕರಣ ಘಟಕವನ್ನು ಸ್ಥಾಪಿಸಬೇಕು. ನೀರಿನಲ್ಲಿ ಕರಗುವ ಹ್ಯೂಮ್ಯಾಕ್ ಆಸಿಡ್ ಎಂಬ ಕೊಟ್ಟಿಗೆ ಗೊಬ್ಬರವನ್ನು ಬಳಸಿ ರಾಸಾಯನಿಕ ಗೊಬ್ಬರದಿಂದ ದೂರವಿರಿ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾಧರ್ಮೇಂದ್ರ, ನೀಲಿ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ರಾಮಣ್ಣ, ವಿ.ಟಿ.ಪಿ.ಸಿ. ಮುಖ್ಯಸ್ಥ ವಿ.ಎಸ್.ಹೆಗ್ಡೆ, ಜಂಟಿ ನಿರ್ದೇಶಕ ಕೃಷ್ಣಮೂರ್ತಿ, ಪ್ರಗತಿಪರ ರೈತರಾದ ವೇಣುಗೋಪಾಲ, ಮುತ್ತೂರು ಕೆಂಪೇಗೌಡ, ವೈನ್ಬೋರ್ಡ್ನ ಉಪನಿರ್ದೇಶಕ ಬಿ.ಕೃಷ್ಣಪ್ಪ, ತೋಟಗಾರಿಕೆ ಇಲಾಖೆಯ ಗಾಯಿತ್ರಿ, ಸಹಾಯಕ ನಿರ್ದೇಶಕ ಆನಂದ್, ಐ.ಹೆಚ್.ಆರ್.ವಿಜ್ಞಾನಿ ಡಾ.ಸಂಪತ್ಕುಮಾರ್, ದೊರೆಯಪ್ಪಗೌಡ, ಡಾ.ಹೊನ್ನಬೈರಯ್ಯ, ಡಾ.ಶ್ರೀನಿವಾಸ್, ಡಾ.ಪ್ರಶಾಂತ್, ನ್ಯಾಷನಲ್ ಲಾ ಸ್ಕೂಲ್ನ ಸಾದ್ವಿ, ತಂಗಮ್ ರಾಮಚಂದ್ರ, ನಾಗರಾಜು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -