27.1 C
Sidlaghatta
Monday, July 14, 2025

ಮಣ್ಣಿನ ಮಕ್ಕಳಾದ ಮುತ್ತೂರು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಮನ್ನಣೆ

- Advertisement -
- Advertisement -

ಇತ್ತೀಚೆಗಷ್ಟೆ ‘ವಿಶ್ವ ಮಣ್ಣಿನ ದಿನ’ವನ್ನು ಕೃಷಿ ಇಲಾಖೆಯ ವತಿಯಿಂದ ಆಚರಿಸಲಾಯಿತು. ನಗರದ ಸ್ತ್ರೀ ಶಕ್ತಿ ಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಕೆಲವೇ ರೈತರಿಗೆ ‘ಮಣ್ಣಿನ ಆರೋಗ್ಯ ನಿರ್ವಹಣೆ’ ಕುರಿತಂತೆ ಅಧಿಕಾರಿಗಳ ಭಾಷಣದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಆದರೆ ಎಲೆಮರೆಯ ಕಾಯಿಗಳಂತೆ, ಕಳೆದೊಂದು ವರ್ಷದಿಂದ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿನ ರೈತರ ತೋಟಗಳಲ್ಲಿ ಮಣ್ಣು ಪರೀಕ್ಷೆ ನಡೆಸಿ ವರದಿ ನೀಡುತ್ತಾ ಸಹಾಯ ಮಾಡುತ್ತಿದ್ದಾರೆ. ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವೈಜ್ಞಾನಿಕ ಲ್ಯಾಬ್ನ ಕಾರ್ಯಚಟುವಟಿಕೆಯನ್ನು ಈ ರೀತಿಯಾಗಿ ಹಮ್ಮಿಕೊಂಡಿರುವ ಈ ವಿದ್ಯಾರ್ಥಿಗಳ ವೈಜ್ಞಾನಿಕ ದೃಷ್ಟಿಕೋನ ಮತ್ತು ಸಾಮಾಜಿಕ ಉಪಯುಕ್ತತೆಯನ್ನು ಪರಿಗಣಿಸಿ ಗುಜರಾತ್ನ ಅಹ್ಮದಾಬಾದ್ನಲ್ಲಿ ಈಚೆಗೆ ಗೌರವಿಸಲಾಗಿದೆ.
‘ನಮ್ಮ ಮುತ್ತೂರು’ ಸಂಸ್ಥೆ ಹಾಗೂ ‘ಸೆಲ್ಕೋ ಫೌಂಡೇಷನ್’ ಸಹಯೋಗದಲ್ಲಿ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನದ ಪ್ರಯೋಗಾಲಯವನ್ನು ನಡೆಸಲಾಗುತ್ತಿದೆ. ತ್ಯಾಜ್ಯ ನಿರ್ವಹಣೆ, ಔಷಧಿವನ, ಪಕ್ಷಿ, ಕೀಟ ವೀಕ್ಷಣೆ ಮತ್ತು ದಾಖಲಾತಿ, ವೈಜ್ಞಾನಿಕ ಪ್ರಯೋಗಗಳು ಮುಂತಾದ ಹಲವು ಉಪಯುಕ್ತ ಚಟುವಟಿಕೆಗಳನ್ನು ವಿದ್ಯಾರ್ಥಿಗಳನ್ನು ವಿಂಗಡಿಸಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಗ್ರಾಮದಲ್ಲಿ ಹಿಪ್ಪುನೇರಳೆ, ದ್ರಾಕ್ಷಿ, ಗುಲಾಬಿ, ರಾಗಿ, ಜೋಳ, ಆಲೂಗಡ್ಡೆ ಮುಂತಾದ ಬೆಳೆ ಬೆಳೆಯುವ ರೈತರ ಜಮೀನುಗಳಲ್ಲಿ ಮಣ್ಣನ್ನು ಸಂಗ್ರಹಿಸಿ, ಶಾಲೆಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಅದರ ವರದಿಯನ್ನು ರೈತರಿಗೆ ನೀಡಿ, ಅವರ ಜಮೀನಿನ ಮಣ್ಣಿನಲ್ಲಿರುವ ಪೌಷ್ಠಿಕಾಂಶಗಳ ಬಗ್ಗೆ ವಿವರ ನೀಡಿ, ಬೆಳೆಯ ಗುಣಮಟ್ಟ ಹಾಗೂ ಇಳುವರಿ ಹೆಚ್ಚಿಸಲು ನೀಡಬೇಕಾದ ಪೌಷ್ಠಿಕಾಂಶಗಳ ಬಗ್ಗೆಯೂ ವಿವರಿಸಲಾಗುತ್ತಿದೆ.
ಕೇವಲ ವೈಜ್ಞಾನಿಕ ಚಟುವಟಿಕೆಯಾಗಿ ನಡೆಸಿಕೊಂಡು ಬರುತ್ತಿದ್ದ ವಿದ್ಯಾರ್ಥಿಗಳ ಮಣ್ಣು ಪರೀಕ್ಷೆಯ ಸಂಗತಿಯು ಈಗ ರಾಷ್ಟ್ರಮಟ್ಟದ ಮನ್ನಣೆಗೆ ಪಾತ್ರವಾಗಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ‘ಬದಲಾವಣೆಗಾಗಿ ವಿನ್ಯಾಸ’ ಎಂಬ ವಿಶಿಷ್ಠವಾದ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ದೇಶದಾದ್ಯಂತ ಸಾವಿರಾರು ಮಂದಿ ವಿದ್ಯಾರ್ಥಿಗಳ ವಿನ್ಯಾಸಗಳನ್ನು ಪರಿಗಣಿಸಲಾಗುತ್ತದೆ. ಹಣ ಸಂಪಾದಿಸಲು ಅಲ್ಲದೆ ಸಾಮಾಜಿಕ ಬದ್ಧತೆಯಿಂದ, ಉಪಯುಕ್ತತೆಯಿಂದ ಕೂಡಿರುವ ವಿನ್ಯಾಸಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಈ ಬಾರಿ ದೇಶದ 2,546 ಶಾಲೆಗಳಿಂದ 4,756 ವಿನ್ಯಾಸಗಳನ್ನು ಪರೀಕ್ಷಿಸಿ 100 ವಿನ್ಯಾಸಗಳನ್ನು ಆಯ್ಕೆ ಮಾಡಿದ್ದಾರೆ. ಅವರಲ್ಲಿ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಕೃಷಿ ಅಗತ್ಯಕ್ಕೆ ಮಣ್ಣು ಪರೀಕ್ಷೆಯ ವಿನ್ಯಾಸವೂ ಆಯ್ಕೆಯಾಗಿರುವುದು ತಾಲ್ಲೂಕಿಗೆ ಹಿರಿಮೆಯನ್ನು ತಂದಿದೆ.
ಅಹ್ಮದಾಬಾದ್ನಲ್ಲಿ ಡಿಸೆಂಬರ್ 5 ರಂದು ನಡೆದ ಕಾರ್ಯಕ್ರಮಕ್ಕೆ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಿಂಧು, ಅನೂಷಾ, ಲೋಕೇಶ್, ಶಾಲೆಯ ಮುಖ್ಯ ಶಿಕ್ಷಕ ಆಂಜನೇಯ, ವಿಜ್ಞಾನ ಪ್ರಯೋಗಾಲಯದ ಬೋಧಕ ಮೆಹಬೂಬ್ಪಾಷ, ಸೆಲ್ಕೋ ಫೌಂಡೇಷನ್ನ ನವೀನ್ ಮತ್ತು ಸ್ನೇಹ ತೆರಳಿದ್ದರು.
‘ನಮ್ಮ ಶಾಲೆಯಲ್ಲಿ ಪಠ್ಯಕ್ಕೆ ಉಪಯುಕ್ತವಾಗುವ ವಿಜ್ಞಾನ ಪ್ರಯೋಗಾಲಯವನ್ನು ‘ನಮ್ಮ ಮುತ್ತೂರು’ ಸಂಸ್ಥೆ ಹಾಗೂ ‘ಸೆಲ್ಕೋ ಫೌಂಡೇಷನ್’ ಸಹಯೋಗದಲ್ಲಿ ಕೆಲ ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಶಾಲೆಯಲ್ಲಿನ ನೀರಿನ ಸದ್ಭಳಕೆ, ತ್ಯಾಜ್ಯದಿಂದ ಬಯೋಗ್ಯಾಸ್ ನಿರ್ವಹಣೆ ಹಾಗೂ ಅದರಿಂದ ಅಡುಗೆ ಮಾಡುವುದು, ಔಷಧಿವನ ಮುಂತಾದ ಹಲವಾರು ಕೆಲಸಗಳನ್ನು ಮಾಡುತ್ತಿದ್ದೇವೆ. ಇದರ ಭಾಗವಾಗಿ ನಾವು ನಡೆಸುವ ಕೃಷಿ ಅಗತ್ಯಕ್ಕೆ ಮಣ್ಣು ಪರೀಕ್ಷೆಯು ರಾಷ್ಟ್ರಮಟ್ಟದ ಮನ್ನಣೆಗೆ ಪಾತ್ರವಾಗಿದ್ದು ನಿಜಕ್ಕೂ ಸಂತಸ ತಂದಿದೆ. ನಮ್ಮನ್ನು ಅಷ್ಟು ದೂರದ ಅಹ್ಮದಾಬಾದ್ಗೆ ಹೋಗಲು ನಮ್ಮ ಮುತ್ತೂರು ಸಂಸ್ಥೆಯ ನಿರ್ವಾಹಕಿ ಉಷಾಶೆಟ್ಟಿ ಆರ್ಥಿಕ ಸಹಾಯವನ್ನು ಒದಗಿಸಿ ಪ್ರೇರೇಪಿಸಿದರು. ಅಹ್ಮದಾಬಾದ್ನಲ್ಲಿ ಹಲವಾರು ಹೊಸ ವಿಷಯಗಳನ್ನು ಕಲಿತೆವು, ಸಮಾನ ಮನಸ್ಕರ ಪರಿಚಯವಾಯಿತು. ಕಾರ್ಯಕ್ರಮವನ್ನು ಮಕ್ಕಳಿಗಾಗಿಯೇ ಅಲ್ಲಿನವರು ವಿಶಿಷ್ಠವಾಗಿ ನಡೆಸಿದ್ದರು’ ಎಂದು ವಿದ್ಯಾರ್ಥಿಗಳಾದ ಸಿಂಧು, ಅನೂಷಾ ಮತ್ತು ಲೋಕೇಶ್ ತಮ್ಮ ಅನುಭವಗಳನ್ನು ವಿವರಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!