ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಳ್ಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಜೀ ಮಹಾರಾಜ್ ಮಾತನಾಡಿದರು.
ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಯುವ ಜನರು ಮೈಗೂಡಿಸಿಕೊಂಡಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದ ಹೆಸರೇ ಒಂದು ಪ್ರೇರಣೆ. ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದರೋ ಅದೇ ರೀತಿ ಬರವಣಿಗೆ ಮೂಲಕವೂ ಕ್ರಾಂತಿ ಮಾಡಿದವರು. ಕವಿ ರವೀಂದ್ರನಾಥ ಠಾಗೂರರು ಅವರ ಬಗ್ಗೆ ಹೇಳುತ್ತಾ, “ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ” ಎಂದಿದ್ದರು. ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ. ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಇವರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು. ಹಾಗಾಗಿ ಅವರಿಂದ ವಿದ್ಯಾರ್ಥಿಗಳು ಪ್ರೇರಣೆ ಹೊಂದಬೇಕು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಕೋಡಿರಂಗಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅದಮ್ಯ ಉತ್ಸಾಹ, ಗುರುಯೆಡೆಗೆ ಸಾಗುವ ಇಚ್ಛಾಶಕ್ತಿ, ಬಿಡದ ಪ್ರಯತ್ನ, ಆತ್ಮನಂಬಿಕೆ ಇರಬೇಕು. ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವ್ಯಕ್ತಿತ್ವವು ಸಾಧನೆಗೆ ಪ್ರೇರಕವಾಗುತ್ತದೆ. ಜಾತಿ, ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಹಲವು ಸಾಧಕರು ತಮ್ಮ ಬದುಕಿನೊಂದಿಗೆ ನಮಗೆ ಉದಾಹರಣೆಯಾಗಿದ್ದಾರೆ. ಯಾವುದೂ ಸುಲಭವಲ್ಲ ಹಾಗೆಯೇ ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ ಎಂದು ನುಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಜನಾರ್ಧನ್ ಮಾತನಾಡಿ, ಪರೀಕ್ಷೆ ಎದುರಿಸಲು ಸುಲಭೋಪಾಯವೆಂದರೆ ಆರಂಭದಿಂದ ಓದಲು ಶುರು ಮಾಡುವುದು. ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು. ಹೆಚ್ಚೆಚ್ಚು ಬಾರಿ ಪುನರಾವರ್ತನೆ ಮಾಡುವುದು. ಮೊಬೈಲ್ ಬಳಕೆಗೆ ಸ್ವಯಂ ನಿಷೇಧ ವಿಧಿಸುವುದು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು. ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು ಎಂದು ವಿವರಿಸಿದರು.
ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಎನ್. ರಾಮಾಂಜನಪ್ಪ, ಗೌರವ ಕಾರ್ಯದರ್ಶಿ ಎಂ.ಆರ್.ಶಿವಣ್ಣ, ನಿರ್ದೇಶಕರಾದ ಸಿ.ನಾರಾಯಣಸ್ವಾಮಿ, ಎಂ.ಕೆ.ಚಂದ್ರಶೇಖರ್, ಸಿ.ಎಂ.ದೇವರಾಜ್, ಪ್ರಾಂಶುಪಾಲ ಎಂ.ಚಂದ್ರಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -