ವಿಶ್ವಾದ್ಯಂತ ಎಚ್ಐವಿ ಪೀಡಿತರಿಗಾಗಿ, ಸೋಂಕಿನಿಂದ ಪ್ರಾಣ ತ್ಯಜಿಸಿಸಿದವರಿಗಾಗಿ ಆಚರಿಸಲ್ಪಡುವ ದಿನ ‘ಏಡ್ಸ್ ದಿನಾಚರಣೆ’. ಇದೊಂದು ಮಾನಸಿಕ ಸ್ಥೈರ್ಯ ತುಂಬುವ ದಿನ, ಜಾಗೃತಿ ಮೂಡಿಸುವ ದಿನ, ಜನರ ಮೌಢ್ಯತೆಯನ್ನು ಮಟ್ಟ ಹಾಕುವ ದಿನ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಏಡ್ಸ್ ದಿನಾಚರಣೆ’ ಯ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆ ರೋಗದಂತೆ ಏಡ್ಸ್ ಸಹ ಒಂದು ರೋಗ, ನಮ್ಮಂತೆ ಅವರೂ ಮನುಷ್ಯರು, ನಮ್ಮೊಂದಿಗೆ ಅವರಿಗೂ ಬದುಕುವ ಅರ್ಹತೆ ಇದೆ ಎಂಬುದನ್ನು ಮನಗಾಣಬೇಕು. ಎಚ್ಐವಿ ಸೋಂಕಿತರನ್ನು ಅಸೃಶ್ಯರಂತೆ ಕಾಣದೆ, ಅವರಿಗೆ ಏಡ್ಸ್ ಬಗ್ಗೆ ವೈಜ್ಞಾನಿಕ, ವೈದ್ಯಕೀಯ ಮಾಹಿತಿ ನೀಡಬೇಕು. ಭಾರತದಲ್ಲಿ ಲೈಂಗಿಕ ಸೋಂಕಿಗಿಂತ ಹೆಚ್ಚಾಗಿ ಅಜ್ಞಾನದಿಂದ ಅಮಾಯಕರು ಏಡ್ಸ್ ಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಸಹ ಇದರಿಂದ ಹೊರತಾಗಿಲ್ಲ. ಏಡ್ಸ್ ಬಂದರೆ ಸಾವೇ ಗತಿ ಎಂಬ ಪೂರ್ವಾಗ್ರಹ ತಲೆಯಿಂದ ತೆಗೆಯಬೇಕು. ಮೊದಲ ಹಂತದಲ್ಲಿಯೇ ಎಚ್ಐವಿ ನಿಯಂತ್ರಿಸಬಹುದು ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ ಮಾತನಾಡಿ, ಎಚ್ಐವಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗ ಬೇಕು. ಬದುಕಿನ ಬಗ್ಗೆ ವಿಶ್ವಾಸ ಮೂಡಿಸಿ ಜೀವನೋತ್ಸಾಹ ತುಂಬಬೇಕು ಎಂದು ಹೇಳಿದರು.
ವಿಶ್ವ ಏಡ್ಸ್ ದಿನದ ಅಂಗವಾಗಿ ಆಶಾ ಕಾರ್ಯಕರ್ತೆಯರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ತಾಲ್ಲೂಕು ವೈದ್ಯಾಧಿಕಾರಿ ಅನಿಲ್ ಕುಮಾರ್, ಆಡಳಿತಾ ವೈದ್ಯಾಧಿಕಾರಿ ಸುನೀತಾ ದೇವೇಂದ್ರ, ಡಾ.ವಿಜಯ ಕುಮಾರ್, ವಕೀಲರಾದ ಮಂಜುನಾಥ್, ಆರ್.ವಿ.ವೀಣಾ, ಆಪ್ತ ಸಮಾಲೋಚಕ ಎನ್.ಗಂಗಾಧರಯ್ಯ, ಮಂಜುನಾಥಸ್ವಾಮಿ, ಕುಮಾರಸ್ವಾಮಿ, ಮುನಿರತ್ನಮ್ಮ, ನಂದಿನಿ, ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -