ಶಿಡ್ಲಘಟ್ಟ ಮತ್ತು ಚಿಂತಾಮಣಿ ಕಾರ್ಮಿಕ ನಿರೀಕ್ಷಕರು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಗುರುವಾರ ನಗರದ ವಿವಿಧೆಡೆ ಧಾಳಿ ನಡೆಸಿ ಮೂವರು ಬಾಲ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡರು.
ನಗರದ ಶಾರದಾ ಕಾನ್ವೆಂಟ್ ಬಳಿ ಮತ್ತು ಬೈಪಾಸ್ ರಸ್ತೆಯಲ್ಲಿ ಗ್ಯಾರೇಜ್, ಮರಗೆಲಸದ ಅಂಗಡಿ ಮತ್ತು ಎಲೆಕ್ಟ್ರಿಕ್ ವೈರಿಂಗ್ ಅಂಗಡಿಗಳಲ್ಲಿ ಧಾಳಿ ನಡೆಸಿ ಮೂವರು ಬಾಲ ಕಾರ್ಮಿಕರನ್ನು ಪತ್ತೆಹಚ್ಚಿದರು.
‘ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಾವು ಈ ದಿನ ಈ ದಿಢೀರ್ ಧಾಳಿ ನಡೆಸಿದ್ದೇವೆ. 14 ವರ್ಷದ ಮೇಲಿನ ಹಾಗೂ 18 ವರ್ಷ ಒಳಗಿನ ಕಾರ್ಮಿಕರನ್ನು ಅಪಾಯಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಹಾಗೂ 14 ವರ್ಷ ವಳಪಟ್ಟ ಬಾಲ ಕಾರ್ಮಿಕರನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು 2016ರ ತಿದ್ದುಪಡಿ ಕಾಯ್ದೆ ನಿಷೇಧಿಸುತ್ತದೆ’ ಎಂದು ತಿಳಿಸಿದ ಕಾರ್ಮಿಕ ನಿರೀಕ್ಷಕ ವಿಶ್ವನಾಥ್, ‘ಈ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು. ಬಾಲ ಕಾರ್ಮಿಕರನ್ನು ಹೋಟೆಲ್, ಗ್ಯಾರೇಜ್, ಚಹಾ ಅಂಗಡಿ, ಕಟ್ಟಡ ಕಾಮಗಾರಿ ಸೇರಿದಂತೆ ಅಪಾಯಕರ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿದ್ದರೆ ಅದು ಶಿಕ್ಷಾರ್ಹ ಅಪರಾಧ ಆಗುತ್ತದೆ. ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ಮೂವರಲ್ಲಿ ಒಬ್ಬರ ವಯಸ್ಸಿನ ದೃಢೀಕರಣ ಪತ್ರವನ್ನು ನೀಡಿ 18 ವರ್ಷಕ್ಕೂ ಮೇಲ್ಪಟ್ಟಿದ್ದರಿಂದ ಪೋಷಕರು ಕರೆದುಕೊಂಡು ಹೋದರು.
ಚಿಂತಾಮಣಿ ಕಾರ್ಮಿಕ ನಿರೀಕ್ಷಕಿ ಕಲಾವಾಣಿ, ಅಧಿಕಾರಿಗಳಾದ ರಮೇಶ್, ಆಂಜಿನಪ್ಪ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನವೀನ್ ಹಾಜರಿದ್ದರು.
- Advertisement -
- Advertisement -
- Advertisement -