ವ್ಯವಸಾಯಕ್ಕೆ ಬರುವ ಜಾನುವಾರುಗಳ ಸಾಕಣಿಕೆ ಕ್ಷೀಣವಾದದ್ದು, ಕೂಲಿಯಾಳುಗಳ ಅಭಾವ, ತೀವ್ರ ಜಲಕ್ಷಾಮ ಮುಂತಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ತಮ್ಮ ಕೈಗೆ ಎಟುಕುವಂತಹ ಆಧುನಿಕ ಕೃಷಿ ಯಂತ್ರೋಪಕರಣಗಳಿಗೆ ಶರಣಾಗತೊಡಗಿದ್ದಾರೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಗೆ ಬೃಹತ್ ಯಂತ್ರದ ಆಗಮನವಾಗಿದೆ. ರಾಗಿ ಬೆಳೆಯ ಕಟಾವನ್ನು ಯಂತ್ರದ ಮೂಲಕ ನಡೆಸಲಾಗುತ್ತಿದೆ. ಒಬ್ಬರಿಂದೊಬ್ಬರು ಯಂತ್ರದ ಬಗ್ಗೆ ತಿಳಿದುಕೊಂಡು ತಮ್ಮ ಹೊಲಕ್ಕೂ ಕರೆದೊಯ್ಯುತ್ತಿದ್ದಾರೆ. ಸಮಯ ಹಾಗೂ ಹಣದ ಉಳಿತಾಯವಾಗುತ್ತದೆಂದು ರೈತರು ಯಂತ್ರದ ಮೊರೆಹೋಗಿದ್ದಾರೆ.
ಕೃಷಿಯಲ್ಲಿ ಮಿತ್ಸುಬಿಷಿ ಟಿಲ್ಲರ್ ಪ್ರವೇಶದೊಂದಿಗೆ ಯಂತ್ರಗಾರಿಕೆಯ ಪ್ರವೇಶವಾಯಿತು ಎನ್ನಬಹುದು. ನಂತರದಲ್ಲಿ ಟ್ರಾಕ್ಟರ್ ಇತ್ಯಾದಿಗಳು ಬರುತ್ತಿದ್ದಂತೆ ಕೃಷಿಯಲ್ಲಿ ಎತ್ತು ಮತ್ತು ಕೋಣಗಳ ಪ್ರಾಶಸ್ತ್ಯ ಅಥವಾ ಬಳಕೆ ಕಡಿಮೆಯಾಗತೊಡಗಿತು. ಇದಕ್ಕೆ ಅನುಕೂಲವೆಂಬಂತೆ ಜಾನುವಾರು ಮೇವು ನೀರುಗಳಿಗೆ ಬರವುಂಟಾಗುವಂತೆ ಮಳೆರಾಯ ಮಾಡಿದ. ವರ್ಷದಿಂದ ವರ್ಷಕ್ಕೆ ವರ್ಷಾಪಾತ ಕಡಿಮೆಯಾದಂತೆ ಅದರ ಪ್ರಭಾವ ಕೃಷಿ ಮತ್ತು ಜಾನುವಾರು ಕೆಲಸಗಳ ಮೇಲೆ ಉಂಟಾಯಿತು. ಈ ಕೊರತೆಯನ್ನು ನಿವಾರಿಸಿಕೊಳ್ಳಲು ಕೃಷಿ ಯಂತ್ರಗಳಿಗೆ ಮೊರೆಹೋಗುವುದು ರೈತನಿಗೆ ಅನಿವಾರ್ಯವಾಯಿತು. ಸಣ್ಣಗಾತ್ರದ ಯಂತ್ರಗಳನ್ನು ಅವಲಂಬಿಸಿದ್ದ ಕೃಷಿಕ ಈಗ ಬೃಹತ್ ಯಂತ್ರಗಳನ್ನು ತನ್ನ ಹೊಲಗದ್ದೆಗಳಿಗೆ ಬರಮಾಡಿಕೊಳ್ಳುತ್ತಿದ್ದಾನೆ.
ಹಿಂದೆ ಹೊಲಗದ್ದೆಗಳ ಕೊಯ್ಲು ಕಾರ್ಯಗಳು ಮಾನವ ಶಕ್ತಿಯಿಂದ ನಡೆಯುತ್ತಿದ್ದವು. ಇದರ ಕಾಲಾವಧಿ ದಿನಗಟ್ಟಲೆ ಆಗುತ್ತಿತ್ತು. ಆಗ ಕೃಷಿ ಕಾರ್ಮಿಕರು ಸುಲಭವಾಗಿ ಸಿಗುತ್ತಿದ್ದರು. ಕಾರಣ ಸರ್ಕಾರಿ ಯೋಜನೆಗಳ ಕೃಷಿಯೇತರ ಕಾಮಗಾರಿಗಳು ಮತ್ತು ಗುತ್ತಿಗೆ ಪದ್ಧತಿ ಬಹಳ ಕಡಿಮೆಯದಾಗಿತ್ತು. ದುಡಿಮೆಯೆಂದರೆ ಕೃಷಿರಂಗದಲ್ಲಿ ಮಾತ್ರ ಎಂಬಂತಾಗಿತ್ತು.
ಬದಲಾದ ಪರಿಸರ ಮತ್ತು ಆಧುನಿಕ ಕೃಷಿ ವಿಜ್ಞಾನ ಕ್ಷೇತ್ರದಲ್ಲಾದ ಆವಿಷ್ಕಾರಗಳು ಆದ್ಯತೆಗಳ ಕ್ರಮವನ್ನೇ ಬದಲಿಸಿಬಿಟ್ಟವು. ಹಾಗೆಯೇ ಬೀಜ ಸಂಸ್ಕೃತಿ ಮತ್ತು ಬೇಸಾಯದ ಕಾಲ – ಕ್ರಮಗಳಲ್ಲಿಯೂ ಬದಲಾವಣೆಗಳಾದವು. ಇದನ್ನು ಅನುಸರಿಸುವುದು ಲಾಭದಾಯಕ ಅನ್ನಿಸಿ ಮತ್ತು ಕಾರ್ಯಶೀಘ್ರತೆ ಎಂಬುದನ್ನು ಮನಗಂಡು ಕೂರಿಗೆ ಬಿತ್ತನೆ, ಕೈ ಬಿತ್ತನೆ, ಕೂಲಿಕಾರರಿಂದ ಕಳೆ ತೆಗೆಸುವುದು, ಕೈ ಕುಯಿಲು ಇವೆಲ್ಲಾ ಹಿಂದಕ್ಕೆ ಸರಿದು ಮಾನವನ ಕೈ ಆಡುತ್ತಿದ್ದ ಹೊಲಗದ್ದೆಗಳಲ್ಲಿ ಯಂತ್ರಗಳ ಮುಳ್ಳು ಇಲ್ಲವೆ ಹಲ್ಲುಗಳು ಆಡತೊಡಗಿದವು.
ಸರಳ ಹಾಗೂ ಸುಲಭವಾದದ್ದನ್ನು ಬಳಸಿಕೊಳ್ಳುವುದು ಮಾನವನ ಸಹಜ ಗುಣವಾಗಿ ಬೆಳೆದುಬಂದಂತೆ ಶ್ರಮಿಕನಾದ ರೈತನು ಇದರಿಂದ ದೂರ ಸರಿಯದೆ ಯಂತ್ರೋಪಕರಣಗಳನ್ನು ತನ್ನ ಕೆಲಸಕಾರ್ಯಗಳಲ್ಲಿ ಬಳಕೆಗೆ ತಂದುಕೊಂಡ. ದೊಡ್ಡ ಮತ್ತು ಸ್ಥಿತಿವಂತ ರೈತರು ಬಂಡವಾಳ ಹಾಕಿ ಯಂತ್ರೋಪಕರಣಗಳನ್ನು ಖರೀದಿಸಿಕೊಂಡರೆ ಮಧ್ಯಮ ವರ್ಗದ ಅನುಕೂಲಸ್ಥ ರೈತ ಬ್ಯಾಂಕು ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಮಾಡಿ ಇವನ್ನು ತೆಗೆದುಕೊಳ್ಳುವಂತಾಯಿತು. ಸಣ್ಣ ಹಿಡುವಳಿದಾರ ರೈತ ಹಾಗೂ ಅತಿ ಸಣ್ಣ ರೈತರು ಇಂತಹ ಯಂತ್ರಗಳನ್ನು ಬಾಡಿಗೆಗೆ ಪಡೆಯಬೇಕಾಗಿತು.
ಇದು ಹೊಸ ಪದ್ಧತಿಯೇನೂ ಅಲ್ಲ. ಹಿಂದೆ ಕೂಲಿ ನೇಗಿಲುಗಳು ಎತ್ತಿನ ಗಾಡಿಗಳು ಇದ್ದವು. ಅವುಗಳ ಜಾಗದಲ್ಲಿ ಈಗ ಯಂತ್ರಗಳು ಬಂದಿವೆಯಷ್ಟೆ. ಇದು ಕೃಷಿ ವಲಯದ ಸ್ಥಿತ್ಯಂತರಗಳು. ಹುಲ್ಲು, ಹುರುಳಿ ಬೇಳೆ, ಬೂಸ, ಕಲಗಚ್ಚು, ಕೃಷಿ ಜಾನುವಾರುಗಳಿಗೆ ಉರುವಲಾಗಿದ್ದವು. ಆ ಜಾಗದಲ್ಲಿ ಈಗ ಡೀಸಲ್ ಬಳಕೆಯಾಗುತ್ತಿದೆಯಷ್ಟೆ.
ಕಟಾವು ಮತ್ತು ಕಾಳು ವಿಂಗಡಿಸುವ ಯಂತ್ರವನ್ನು ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಬಚ್ಚಣ್ಣ ಆಂದ್ರದ ಅನಂತಪುರದಿಂದ ತರಿಸಿದ್ದಾರೆ. ಇದರ ವೆಚ್ಚ ಗಂಟೆಯೊಂದಕ್ಕೆ 3,500 ರೂಪಾಯಿಗಳು. ಒಂದು ಗಂಟೆಯ ಅವಧಿಯಲ್ಲಿ ಇದು ಒಂದರಿಂದ ಒಂದೂವರೆ ಎಕರೆಯಲ್ಲಿನ ಬೆಳೆಯನ್ನು ಕಟಾವು ಮಾಡಿ ಹುಲ್ಲು ಮತ್ತು ಕಾಳನ್ನು ಬೇರ್ಪಡಿಸುತ್ತದೆ. ಅವರೆ ಮತ್ತು ಜೋಳದ ಸಾಲುಗಳಿಲ್ಲದಿದ್ದರೆ ಮತ್ತು ಹೊಲ ಚದರವಾಗಿದ್ದರೆ ಕಟಾವಿನ ಕೆಲಸ ಬೇಗ ಮುಗಿಯುತ್ತದೆ. ಹಾಗೆಯೇ ವಿಂಗಡಿಸಿದ ಕಾಳನ್ನು ಈ ಯಂತ್ರ ತನ್ನ ಸಂಗ್ರಹ ಚೇಂಬರಿನಲ್ಲಿ ಇಟ್ಟುಕೊಂಡಿದ್ದು ಅದನ್ನು ಟ್ರಾಕ್ಟರಿಗೆ ವರ್ಗಾಯಿಸುತ್ತದೆ. ಹೀಗಾಗಿ ವರ್ಗಾಯಿಸುವ ಶ್ರಮವೂ ರೈತನಿಗಿರದು. ಜೊತೆಗೆ ಇದೇ ಯಂತ್ರ ದವಸವನ್ನು ಕಲ್ಲು ಮಣ್ಣುಗಳಿರದೆ ಸೋಸುತ್ತದೆ ಎಂದು ಅವರು ಹೇಳಿದರು.
ಸುಗ್ಗಿಕಾಲಕ್ಕೆ ಈ ಯಂತ್ರವನ್ನು ಬರಮಾಡಿಕೊಳ್ಳಲಾಗುತ್ತದೆ. ಒಬ್ಬರ ಕೆಲಸ ಮುಗಿಸಿದ ನಂತರ ಅಕ್ಕಪಕ್ಕದವರು ಇದನ್ನು ಬಾಡಿಗೆಗೆ ಪಡೆಯುತ್ತಾರೆ. ಹೀಗೆ ಈ ಯಂತ್ರ ಹಲವರ ಹೊಲಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಇಂಥಹ ಯಂತ್ರ ಹತ್ತಿರದಲ್ಲೇ ದೊರೆಯುವಂತಾಗಿದ್ದರೆ, ಸ್ವಲ್ಪ ಮಟ್ಟಿಗಿನ ಖರ್ಚು ಕಡಿಮೆಯಾಗುತ್ತಿತ್ತು ಎಂಬುದು ಬಚ್ಚಣ್ಣನವರ ಅನಿಸಿಕೆ.
ಈ ಕೊಯ್ಲು ಯಂತ್ರದಿಂದ ಅನುಕೂಲವಿರುವುದು ಸರಿಯೇ. ಆದರೆ ಅವರೆ, ಜೋಳ, ನವಣೆ, ಹರಿಸಾಮೆ, ಹುಚ್ಚೆಳ್ಳಿನಂಥಹ ಬೆಳೆಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯುವ ಅವಕಾಶಗಳು ಕಡಿಮೆಯಾಗುತ್ತವೆ. ಮತ್ತು ತುಂಡು ಭೂಮಿ ಬೇಸಾಯಕ್ಕೆ ಈ ಯಂತ್ರ ಸಹಕಾರಿಯಲ್ಲ ಎಂಬುದನ್ನು ಗ್ರಹಿಸಬೇಕಿದೆ. ನಮ್ಮಲ್ಲಿ ತುಂಡು ಭೂಮಿಯ ಬೇಸಾಯಗಾರರು ಅನೇಕರಿದ್ದಾರೆ. ಈ ಯಂತ್ರ ಫಾರಮ್ ಸ್ವರೂಪದ ಬೇಸಾಯಗಾರರಿಗೆ ಹೆಚ್ಚು ಉಪಯುಕ್ತ. ಈ ಯಂತ್ರದ ಬಳಕೆಯಿಂದ ಕಣದಲ್ಲಾಗುತ್ತಿದ್ದ ಕೆಲಸಗಳನ್ನು ಮಾಡಬಹುದಾದುದರಿಂದ ಈಗ ರಸ್ತೆಗಳಲ್ಲಿ ಒಕ್ಕಣಿಕೆಗಳಿಂದ ಉಂಟಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಬಹುದು.
- Advertisement -
- Advertisement -
- Advertisement -
- Advertisement -