ನಾಡು ಮತ್ತು ನುಡಿಯ ಬಗ್ಗೆ ಜಾಗೃತಿ ಮೂಡಿಸುವುದು, ಯುವಜನಾಂಗವನ್ನು ಸಮಾಜ ಮುಖಿಯಾಗಿ ಕೆಲಸಮಾಡಲು ಸಂಘಟನೆ ರೂಪಿಸುವುದು, ವಿದ್ಯಾವಂತ ತಂಡದೊಂದಿಗೆ ಅನೇಕ ಚಿಂತನ ಸಭೆಗಳನ್ನು ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕೆಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಭಾನುವಾರ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಕೆಲವು ರಾಜಕೀಯ ವ್ಯಕ್ತಿಗಳಿಂದ ಹಿಡಿದು ಕೆಲವು ಅಧಿಕಾಗಳು ಮತ್ತು ಸಾಮಾನ್ಯ ಜನರವರೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಂತಹ ಸಂದರ್ಭದಲ್ಲಿ, ಭ್ರಷ್ಟರ ವಿರುದ್ದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಸಮಾಜಸೇವೆ ಕೆಲಸಗಳು, ಕನ್ನಡಪರ ಹೋರಾಟಗಳು, ರಕ್ತದಾನ ಶಿಬಿರಗಳು, ನೇತ್ರದಾನ ಶಿಬಿರಗಳು, ಗ್ರಾಮೀಣ ಭಾಗದ ಜನರ ಆರೋಗ್ಯ ಚಿಕಿತ್ಸಾ ಶಿಬಿರಗಳು ಕೂಡ ಸಂಘಟನೆಯಿಂದ ನಡೆಸಬೇಕು. ಇವೂ ಕೂಡ ಕನ್ನಡದ ಕೆಲಸಗಳೇ ಆಗಿವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಸಂಘಟನೆಗಳು ನಾಡು ನುಡಿ ನೆಲ ಜಲದ ರಕ್ಷಣೆಯ ಬಗ್ಗೆ ಮಾತ್ರ ಹೋರಾಟ ಮಾಡಿದರೆ ಸಾಲದು, ಬದಲಿಗೆ ಶಾಶ್ವತ ನೀರಾವರಿ ಸಮಸ್ಯೆ, ರೈತರ ಉತ್ಪಾದನೆಗಳಿಗೆ ಬೆಲೆ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಕೂಡ ಹೋರಾಟ ಮಾಡಬೇಕು ಎಂದು ನುಡಿದರು.
ತಾಲ್ಲೂಕಿನ ಹಂಡಿಗನಾಳ ಬೈಪಾಸ್ ನಿಂದ ಶೆಟ್ಟಿಕೆರೆ ಗ್ರಾಮದವರೆಗೆ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಬೈಕ್ ರ್ಯಾಲಿ ನಡೆಸಿದರು. ಅಬ್ಲೂಡು, ಕೆಂಪನಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ದ್ಯಾವಪ್ಪನಗುಡಿ, ಬಶೇಟ್ಟಿಹಳ್ಳಿ, ಬೈಯಪ್ಪನಹಳ್ಳಿ, ಆಮೂರು ತಿಮ್ಮನಹಳ್ಳಿ, ತಿಮ್ಮನಾಯಕನಹಳ್ಳಿ, ಕುದುಪಕುಂಟೆ, ತಲಕಾಯಲಬೆಟ್ಟ, ಟಿ.ವೆಂಕಟಾಪುರ, ಈ ತಿಮ್ಮಸಂದ್ರ, ಶೆಟ್ಟಿಕೆರೆ ಸೇರಿದಂತೆ ೧೪ ಹಳ್ಳಿಗಳಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ನಾಮ ಫಲಕ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶೆಟ್ಟಿಕೆರೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಬೈರಾರೆಡ್ಡಿ, ಗೌರವಾಧ್ಯಕ್ಷ ಸಂಜೀವಪ್ಪ, ರೈತ ಘಟಕದ ಅಧ್ಯಕ್ಷ ಮಂಜುನಾಥ್, ನಾಗರಾಜ್, ಗಾಯಿತ್ರಮ್ಮ, ಹನುಮಂತರೆಡ್ಡಿ, ನರೇಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -