ಗೋಕಷ್ಟ ನಿವಾರಕ ಎಂದೇ ಪ್ರಸಿದ್ಧಿ ಪಡೆದಿರುವ ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ ಕಾರ್ಯಕ್ರಮ ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮಂಗಳವಾರದಿಂದ ಪ್ರಾರಂಭವಾದ ಆರಾಧನಾ ಮಹೋತ್ಸವವು ಏಳುದಿನಗಳ ಕಾಲ ನಡೆದು ಬರುವ ಮಂಗಳವಾರ ಕೊನೆಗೊಳ್ಳಲಿದೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರು ದ್ಯಾವಪ್ಪನ ತಾತನ ಸಮಾಧಿಗೆ ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿ, ತುಪ್ಪದ ದೀಪ ಬೆಳಗಿ, ಉಪ್ಪು ಹಾಗೂ ಕರಿ ಕಂಬಳ ದಾರವನ್ನು ಮಂತ್ರಿಸಿಕೊಂಡು ಮನೆಗೆ ಕೊಂಡೊಯ್ಯುವುದು ರೂಢಿ . ತಾತನ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ಕುಂಕುಮವನ್ನು ಖಾಯಿಲೆ ಬಿದ್ದ ದನಕರುಗಳ ಹಣೆಗೆ ಇಟ್ಟು ಮಂತ್ರಿಸಿದ ಉಪ್ಪನ್ನು ನೀರಿನಲ್ಲಿ ಬೆರೆಸಿ ದನದ ಹೊಟ್ಟೆಗೆ ಸೇರಿಸಿದರೆ ಸಾಕು ಅದೆಂತಹ ಕಾಯಿಲೆಯಾದರೂ ಸರಿಯೆ ವಾಸಿಯಾಗುತ್ತದೆ ಎಂಬ ನಂಬುಗೆ ಜನಪದರದ್ದು.
ದೇವಸ್ಥಾನದ ಆಸುಪಾಸಿನಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್, ತೆಂಗಿನ ಕಾಯಿ, ಕರಿ ಕಂಬಳ ದಾರ, ದೃಷ್ಟಿ ಬೊಟ್ಟು ದಾರದ ಭರ್ಜರಿ ವ್ಯಾಪಾರವಹಿವಾಟು ನಡೆಯುತ್ತಿದೆ. ತಮ್ಮ ದನಕರು, ರಾಸುಗಳಿಗೆ ಏನಾದರೂ ತೊಂದರೆ ಕಾಣಿಸಿಕೊಂಡಾಗ ದ್ಯಾವಪ್ಪ ತಾತನಿಗೆ ಹರಕೆ ಮಾಡಿಕೊಂಡಿದ್ದ ರೈತರು ತಾವು ಬೆಳೆದ ರಾಗಿ, ಅಕ್ಕಿ, ಬೇಳೆ, ತರಕಾರಿಗಳನ್ನು ಇಂದು ದ್ಯಾವಪ್ಪತಾತನ ಸನ್ನಿಧಿಗೆ ಅರ್ಪಿಸಿದರು. ಹೀಗೆ ಭಕ್ತರು ಸಮರ್ಪಿಸಿದ ದವಸ ಧಾನ್ಯಗಳಿಂದಲೆ ರಾಗಿ ಮುದ್ದೆ, ಹುಳಿ ಸಾರು ತಯಾರಿಸಿ ಆರಾಧನಾ ಮಹೋತ್ಸವಕ್ಕೆ ಬಂದ ಸಾವಿರಾರು ಮಂದಿಗೆ ಬಡಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಹಾಲು ಉಟ್ಲು ಹಾಗೂ ಕಾಯಿ ಉಟ್ಲು, ಕೋಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಪಾನಕ ಬಂಡಿ ಸೇವೆ ನಡೆಯಿತು. ಎತ್ತುಗಳ ಪರಿಷೆಯೂ ನೆರೆದಿದ್ದು ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ನೂರಾರು ಎತ್ತುಗಳು ಬಂದಿದ್ದು, ದ್ಯಾವಪ್ಪ ತಾತನ ದೇವಾಲಯ ಸಮಿತಿಯಿಂದ ಕುಡಿಯುವ ನೀರು ಇನ್ನಿತರೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ರೈತರ ನಿತ್ಯ ಬಳಕೆಯ ವಸ್ತುಗಳಾದ ಕುಡುಗೋಲು, ಕೊಡಲಿ, ಮಚ್ಚು, ವರಾರಿ, ಜರಡಿ ಮುಂತಾದ ಹತ್ತು ಹಲವು ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಅವನ್ನು ರೈತರು ಕೊಳ್ಳುತ್ತಿದ್ದರು.
ಕಳೆದ ಐದು ದಶಕಗಳಿಂದಲೂ ದ್ಯಾವಪ್ಪತಾತನ ಸಮಾಧಿಗೆ ನಿತ್ಯ ನೂರಾರು ಮಂದಿ ಪೂಜೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯ ಸಮಾಧಿಗೆ ನಿತ್ಯವೂ ಪೂಜೆ ನಡೆಯುತ್ತಿರುವ ಜಿಲ್ಲೆಯ ಏಕೈಕ ಸ್ಥಳವಾಗಿ ದ್ಯಾವಪ್ಪನಗುಡಿಯ ದ್ಯಾವಪ್ಪನ ಸಮಾಧಿ ಎಲ್ಲರ ಗಮನ ಸೆಳೆದಿದೆ.
ತಾಲ್ಲೂಕಿನ ಕೋಟಹಳ್ಳಿಯ ದಿ.ನಂಜಪ್ಪ ಮತ್ತು ದಿ.ಬಯ್ಯಮ್ಮ ಬಡ ರೈತ ದಂಪತಿಗಳ ಎರಡನೆ ಮಗ ದ್ಯಾವಪ್ಪ ಖಾಯಿಲೆ ಬಿದ್ದ ಜಾನುವಾರುಗಳ ಮೈದಡವಿ ನೇವರಿಸಿ ಒಂದು ನಿಮಿಷ ನಿಂತು ಏನನ್ನೋ ದ್ಯಾನಿಸುತ್ತಿದ್ದಿಂತೆಯೇ ಖಾಯಿಲೆ ಬಿದ್ದಿದ್ದ ಜಾನುವಾರು ಚೇತರಿಸಿಕೊಳ್ಳುತ್ತಿತ್ತು ಎಂದು ದ್ಯಾವಪ್ಪ ತಾತನ ಚಮತ್ಕಾರವನ್ನು ಕಣ್ಣಾರೆ ಕಂಡವರು ನೆನಪಿಸಿಕೊಳ್ಳುತ್ತಾರೆ.
ಖಾಯಿಲೆ ವಾಸಿಯಾದ ಸಂತಸಕ್ಕೆ ರೈತರು ಎಷ್ಟೆ ಹಣ ನೀಡಲು ಬಂದರೂ ಅದನ್ನು ನಿರಾಕರಿಸಿ ಕೇವಲ ನಾಲ್ಕಾಣೆ ಮಾತ್ರ ಪಡೆಯುತ್ತಿದ್ದರಂತೆ. ಹೀಗೆ ಸಂಗ್ರಹಿಸಿದ ಹಣವನ್ನು ಗೋಕುಂಟೆ ನಿರ್ಮಾಣಕ್ಕೆ ಬಳಸುತ್ತಿದ್ದರಂತೆ. ಕೋಟಹಳ್ಳಿ ಸಮೀಪದ ಅಜ್ಜಕದಿರೇನಹಳ್ಳಿ-ಗೊರಮ್ಲಿಲಹಳ್ಳಿ ಗಡಿ ಸಮೀಪ ಈಗಲೂ ಗೋಕುಂಟೆಯೊಂದಿದೆ.
ದ್ಯಾವಪ್ಪ ತಾನು ಸತ್ತ ಮೇಲೆ ತನ್ನ ಸಮಾಧಿಗೆ ಪೂಜೆ ಮಾಡಿ ರಾಸುಗಳ ಸಂಕಷ್ಟಗಳು ಪರಿಹಾರವಾಗುತ್ತೆ ಎಂದು ಜನರಿಗೆ ಹೇಳಿದ್ದರಂತೆ. 1949 ರಲ್ಲಿ ಅವರು ವಿಧಿವಶರಾದಾಗ ಅವರ ಇಚ್ಚೆಯಂತೆ ಜಯಂತಿಗ್ರಾಮದಲ್ಲಿ ಸಮಾಧಿಯನ್ನು ನಿರ್ಮಿಸಿದರು. ಆ ಸಮಾಧಿ ಇರುವ ಜಯಂತಿಗ್ರಾಮ ದ್ಯಾವಪ್ಪನಗುಡಿ ಎಂದೆ ಪ್ರಸಿದ್ದಿಪಡೆದಿದೆ.
- Advertisement -
- Advertisement -
- Advertisement -
- Advertisement -