21.1 C
Sidlaghatta
Saturday, July 27, 2024

ಯೋಧನ ಕುಟುಂಬದೆಡೆಗೆ ಕಣ್ತೆರೆಯದ ಜನಪ್ರತಿನಿಧಿಗಳು

- Advertisement -
- Advertisement -

ತಾಲ್ಲೂಕಿನ ಯಣ್ಣಂಗೂರಿನಲ್ಲಿ ಹುತಾತ್ಮ ಯೋಧ ಗಂಗಾಧರ್‌ ಮೃತಪಟ್ಟು ಆಗಲೇ ಒಂದು ವರ್ಷವಾಯಿತು. ಬುಧವಾರ ಯಣ್ಣಂಗೂರಿನಲ್ಲಿ ಒಂದು ವರ್ಷದ ಪೂಜಾ ಕಾರ್ಯವನ್ನು ಕುಟುಂಬದವರು ಆಯೋಜಿಸಿದ್ದಾರೆ.
ಗಂಗಾಧರ್‌ ಓದಿದ್ದ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಜೊತೆಯಲ್ಲಿ ನವೋದಯ ಕಾಲೇಜಿನ ಹಾಗೂ ಯಣ್ಣಂಗೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಹ ಆಹ್ವಾನಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧನ ಸಮಾಧಿ ಸ್ಥಳವನ್ನು ಕುಟುಂಬದವರು ಅಚ್ಚುಕಟ್ಟಾಗಿ ಸುಂದರವಾಗಿ ನಿರ್ಮಾಣ ಮಾಡಿಸಿದ್ದಾರೆ.
ಹುತಾತ್ಮ ಯೋಧ ಗಂಗಾಧರ್‌ ಅವರ ತಮ್ಮ ರವಿಕುಮಾರ್‌ ಕೂಡ ಪ್ರಸ್ತುತ ಬಿಎಸ್‌ಎಫ್‌ನಲ್ಲಿ ಯೋಧನಾಗಿದ್ದು ಕಾಶ್ಮೀರದ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಣ್ಣಮ ಕಾರ್ಯದ ನಿಮಿತ್ತ ರಜೆ ಪಡೆದು ಅವರು ಗ್ರಾಮಕ್ಕೆ ಬಂದಿದ್ದಾರೆ.
ಬರದೇಹೋದ ಸರ್ಕಾರಿ ಸವಲತ್ತುಗಳು
ಒಂದು ವರ್ಷದ ಹಿಂದೆ ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಆಗಿನ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರನ್ನು ಪ್ರಶ್ನಿಸಿದ್ದ ಯೋಧನ ಪತ್ನಿ ಮತ್ತು ಸಂಬಂಧಿಗಳು ಮೃತ ದೇಹ ಬರಲು ಮೂರು ದಿನಗಳಾಗಿದ್ದಕ್ಕೆ ಆಕ್ರೋಷ ವ್ಯಕ್ತಪಡಿಸಿದ್ದರು.
ಲೋಕಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಶ್ನೆ ಮಾಡುವುದಾಗಿ ವೀರಪ್ಪ ಮೊಯ್ಲಿ ಹೇಳಿದ್ದರೆ, ಮುಖ್ಯ ಮಂತ್ರಿಗಳಿಗೆ ವಿಷಯವನ್ನು ತಿಳಿಸಿ ಕೇಂದ್ರಕ್ಕೆ ಪತ್ರ ಬರೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು. ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಯೋಧನ ಕುಟುಂಬಕ್ಕೆ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.
‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಾವು ಏನನ್ನೂ ಬಯಸಿರಲಿಲ್ಲ. ಅವರೇ ಬಂದು ಭರವಸೆ ನೀಡಿದರು. ಆದರೆ ಭರವಸೆಗಳನ್ನು ಈಡೇರಿಸುವುದಿರಲಿ ಕನಿಷ್ಠ ಸೌಜನ್ಯಕ್ಕೂ ಪುನಃ ಬಂದು ಯಾರೂ ನಮ್ಮ ಸ್ಥಿತಿಗತಿ ವಿಚಾರಿಸಲಿಲ್ಲ’ ಎಂದು ಗಂಗಾಧರ್‌ ಅವರ ಮಾವ ಜಯಚಂದ್ರಪ್ಪ ತನ್ನ ನೋವನ್ನು ವ್ಯಕ್ತಪಡಿಸಿದರು.
ಗಂಗಾಧರ್‌ ನೆನಪಿನಲ್ಲಿ ಕುಟುಂಬ
‘ಗಂಗಾಧರ್‌ ಮೃತನಾದ ಮೇಲೆ ಇದ್ದೊಂದು ಕೊಳವೆ ಬಾವಿಯೂ ಬತ್ತಿಹೋಯಿತು. ಮೊದಲು ಹಿಪ್ಪುನೇರಳೆ ಸೊಪ್ಪನ್ನು ಬೆಳೆದು ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದೆವು. ಅದೂ ನಿಂತು ಹೋಯಿತು. ಮಗ ಹೋದ ನೋವು, ಸೊಸೆ ಮತ್ತು ಮೊಮ್ಮಗ ಮಾಮೂಲಿ ಜೀವನಕ್ಕೆ ಹಿಂದಿರುಗಲು ಆರು ತಿಂಗಳು ಬೇಕಾಯಿತು. ಸೊಸೆ ವೈದ್ಯೆಯಾಗಿ ವಿಜಯಪುರದಲ್ಲಿ ಕ್ಲಿನಕ್‌ ನಡೆಸುತ್ತಿದ್ದಾರೆ. ಮೊಮ್ಮಗ ಪವನ್‌ಗೌಡ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಎರಡನೆಯ ಮಗ ರವಿಕುಮಾರ್‌ ಕೂಡ ಸೇನೆಯಲ್ಲಿದ್ದಾನೆ. ನಮ್ಮದು ಆತಂಕದ ಬದುಕು’ ಎನ್ನುತ್ತಾರೆ ಗಂಗಾಧರ್‌ ತಂದೆ ಮುನಿಯಪ್ಪ.
‘ಸೇನೆಯಿಂದ ಬರುವ ಎಲ್ಲಾ ಸವಲತ್ತುಗಳು ತಪ್ಪದೇ ಬರುತ್ತದೆ. ಆದರೂ ಕುಟುಂಬಕ್ಕೆ ಇರುವವನು ನಾನೊಬ್ಬನೇ ಆಸರೆ. ಅಕಸ್ಮಾತ್‌ ನನಗೇನಾದರೂ ಆದರೆ ಕುಟುಂಬದ ಗತಿಯೇನು ಎಂದು ಸದಾ ಅಂದುಕೊಳ್ಳುತ್ತಿರುತ್ತೇನೆ. ಆದರೆ ದೇಶಸೇವೆಗೆ ಹೋದ ನಾನು ಹೇಡಿಯಂತೆ ಹಿಂದಿರುಗಲಾರೆ. ಕುಟುಂಬದವರು ಅಣ್ಣನನ್ನು ಕಳೆದುಕೊಂಡಾಗ ನನ್ನನ್ನು ಕಳುಹಿಸಲು ಸಿದ್ದರಿರಲಿಲ್ಲ. ಅತ್ತಿಗೆಗೆ, ಅಪ್ಪ ಅಮ್ಮರಿಗೆ ಧೈರ್ಯ ಹೇಳಿ ಹೋಗಬೇಕಾಯಿತು. ಒಂದು ವರ್ಷ ಕಳೆದಿದೆ. ದೇಶದ ಗಡಿಯಲ್ಲಿನ ಈಗಿನ ಪರಿಸ್ಥಿತಿಯಲ್ಲಿ ನನಗೆ ರಜೆಯೇ ನೀಡಬಾರದು. ಆದರೂ ಕಳಿಸಿದ್ದಾರೆ. ಅಣ್ಣನ ನೆನಪಿನಲ್ಲಿ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಲಾಗುವುದು. ಸಾಕಷ್ಟು ಜನ ಅಣ್ಣ ಸತ್ತಾಗ ಬಂದು ಸಾಂತ್ವನ ಹೇಳಿದ್ದರು. ಆತನ ಒಂದು ವರ್ಷದ ಪೂಜೆಗೂ ಎಲ್ಲರೂ ಬನ್ನಿ’ ಎಂದು ಗಂಗಾಧರ್‌ ಸಹೋದರ ರವಿಕುಮಾರ್‌ ಹೇಳಿದರು.
ಗಂಗಾಧರ್‌ ಸಮಾಧಿ
‘ಮಗ ನಮ್ಮ ಮುಂದೆಯೇ ಇರಲಿ’ ಎಂಬ ತಂದೆತಾಯಿರ ಬಯಕೆಯಿಂದ ಮನೆಯ ಮುಂದಿನ ತೋಟದಲ್ಲಿ ಗಂಗಾಧರ್‌ ಅವರ ಅಂತಿಮ ಸಂಸ್ಕಾರವನ್ನು ಮಾಡಲಾಗಿತ್ತು. ಆ ಸ್ಥಳದಲ್ಲಿ ಈಗ ಸುಂದರವಾಗಿ ಸಮಾಧಿಯನ್ನು ನಿರ್ಮಿಸಲಾಗಿದೆ. ದೇಶಕ್ಕಾಗಿ ಜೀವನವನ್ನು ಮುಡಿಪಿಟ್ಟ ವೀರ ಯೋಧನ ಕುರುಹಾಗಿ ಎಳೆಯರಿಗೆ ಸ್ಫೂರ್ತಿ ನೀಡುವಂತೆ ಅದನ್ನು ಹೆಚ್ಚು ಹಣ ಖರ್ಚಾದರೂ ನಿರ್ಮಿಸಿರುವುದಾಗಿ ಕುಟುಂಬದವರು ತಿಳಿಸಿದರು.
ಗಂಗಾಧರ್‌ ಕುರಿತ ಮಾಹಿತಿ:
ಎಂ.ಗಂಗಾಧರ್ (೩೯), ಬೆಟಾಲಿಯನ್-೬೬, ಬ್ಯಾಡ್ಜ್ ನಂ ೪೯೧.ರೋಲ್ ನಂ ೯೮೦೦೯೩೧೨, ಸಿ ಕಂಪೆನಿ.
ಜನ್ಮ ದಿನಾಂಕ : 1978ರ ಜೂನ್‌ 10, ಸೇವೆಗೆ ಸೆರಿದ ದಿನಾಂಕ : 1998ರ ಆಗಸ್ಟ್‌ 20
ರಾಜಾಸ್ಥಾನದ ಜೋಧ್‌ಪುರದ ಫ್ರಂಟ್ ಏರ್‌ನಲ್ಲಿ ತರಬೇತಿ ಮುಗಿಸಿ ಜಮ್ಮುವಿನ ಪಲೋಡ, ಅಕ್ಕನೂರು, ಪಂಥಾಚೌಕ್, ಗುಲ್, ಪಂಜಾಬ್, ಕಾಶ್ಮೀರದ ಲೇ, ಪಶ್ಚಿಮಬಂಗಾಲದ ಸಿಲ್ಲಿಗುರಿ ಸೇರಿದಂತೆ ಡಾರ್ಜಲಿಂಗ್‌ನ ಗಡಿಯಲ್ಲಿ ಸೇವೆ ಸಲ್ಲಿಸಿದ್ದರು.
ಮುಂದಿನ ೨೦೧೮ ನೇ ಸಾಲಿನ ಆಗಸ್ಟ್ ೨೦ ಕ್ಕೆ ತಮ್ಮ ೨೦ ವರ್ಷದ ಸೇವೆ ಪೂರ್ಣಗೊಳಿಸಿ ಊರಿಗೆ ಬಂದು ವ್ಯವಸಾಯ ನೋಡಿಕೊಳ್ಳುತ್ತಾ ತಮ್ಮ ಪತ್ನಿ ನಡೆಸುತ್ತಿರುವ ಖಾಸಗಿ ಕ್ಲಿನಿಕ್ ಬಳಿ ಮೆಡಿಕಲ್ ಸ್ಟೋರ್ ತೆಗೆಯಬೇಕು ಎಂಬ ಆಸೆ ಹೊಂದಿದ್ದರು ಎನ್ನಲಾಗಿದೆ. ಆದರೆ ಗಡಿಯಲ್ಲಿ ದೇಶಕ್ಕಾಗಿ 2017 ರ ಜೂನ್‌ 20 ರಂದು ಹುತಾತ್ಮರಾದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!