ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾ ನೆಹರು ಯುವಕೇಂದ್ರ, ರಾಷ್ಟ್ರೀಯ ಯುವಯೋಜನೆಯ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವಸಪ್ತಾಹ ಸಮಾರೋಪ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಎಂ.ಪರಮನಹಟ್ಟಿ ಮಾತನಾಡಿದರು.
ಭಾರತೀಯ ಸಂಸ್ಕೃತಿ, ಇಲ್ಲಿನ ನೆಲದ ಮೌಲ್ಯತೆಗೆ ಇರುವ ಅದ್ಭುತ ಶಕ್ತಿಯಿಂದಾಗಿಯೇ ಸಾಕಷ್ಟು ದಬ್ಬಾಳಿಕೆಗಳು ನಡೆದಿದ್ದರೂ ಕೂಡ ಸೊರಗದೇ ಇಲ್ಲಿಯ ತನಕ ಉಳಿದುಕೊಂಡು ಬರಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ನಮ್ಮ ಸಂಸ್ಕೃತಿಯ ಮೇಲೆ ಅನೇಕ ವರ್ಷಗಳಿಂದಲೂ ನಿರಂತರವಾಗಿ ಅನ್ಯ ರಾಷ್ಟ್ರಗಳ ಪ್ರಬಾವದ ಹೊಡೆತ ಆಗುತ್ತಲೇ ಇದೆ. ಇಂದಿನ ಯುವಪೀಳಿಗೆಯು ಅನ್ಯಸಂಸ್ಕೃತಿಗೆ ಮೊರೆಹೋಗುತ್ತಿದ್ದು, ಭಾರತೀಯ ಸಂಸ್ಕೃತಿಗೆ ಪಾಶ್ಚಿಮಾತ್ಯದ ಪ್ರಭಾವವು ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿದೆ. ಮಕ್ಕಳು ವಿದ್ಯಾರ್ಥಿದಿಸೆಯಲ್ಲಿದ್ದಾಗಲೇ ದಾರ್ಶನಿಕರ, ದೇಶಭಕ್ತರ ಜೀವನಚರಿತ್ರೆಯನ್ನು ಅಧ್ಯಯನ ಮಾಡಿ, ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಸಮಾಜಕ್ಕೆ ನಮ್ಮ ರಾಷ್ಟ್ರದ ಪುರಾತನ ಸಂಸ್ಕೃತಿ, ಇತಿಹಾಸದ ಬಗ್ಗೆ ಒಲವು, ಪ್ರೀತಿ, ಅರಿವಿನ ಅವಶ್ಯಕತೆ ಇದೆ. ಮುಂದಿನ ಪೀಳಿಗೆಗೆ ಸಂಸ್ಕೃತಿ, ಆಚರಣೆ, ಎಲ್ಲವನ್ನೂ ತಿಳಿಸಿದಿದ್ದರೆ ಸಂಸ್ಕೃತಿಯ ಅಧೋಮುಖದ ಸ್ಥಿತಿಗೆ ಕಾರಣವಾಗುತ್ತದೆ ಎಂದರು.
ಮಾತೃಭೂಮಿಗೊಂದು ಪತ್ರ ಬರೆಯುವ ಹಾಗೂ “ನಾ ಅರಿತುಕೊಂಡಂತೆ ಸ್ವಾಮಿವಿವೇಕಾನಂದ” ಎಂಬ ವಿಚಾರವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ರಾಷ್ಟ್ರೀಯ ಯುವ ಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಎಸ್‌ಡಿಎಂಸಿ ಮಾಜಿ ಸದಸ್ಯ ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕರಾದ ಬಿ.ನಾಗರಾಜು, ಎ.ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ ಹಾಜರಿದ್ದರು.
- Advertisement -
- Advertisement -
- Advertisement -