ರೇಷ್ಮೆ ಕೃಷಿಕರ ಬೇಡಿಕೆ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಯ ವತಿಯಿಂದ ಆಯೋಜಿಸಿದ್ದ ರೇಷ್ಮೆ ಕೃಷಿಕರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ನಾಲ್ಕು ತಿಂಗಳಿನಿಂದ ರೇಷ್ಮೆ ಗೂಡು ಬೆಲೆ ಕುಸಿತವಾಗಿದ್ದು ರೇಷ್ಮೆ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಪರಿಹಾರೋಪಾಯಗಳನ್ನು ಕಂಡುಕೊಳ್ಳದಿರುವುದರಿಂದ ರೇಷ್ಮೆ ಕೃಷಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಕಳೆದ ಜೂನ್ 23 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ, ಮುಖ್ಯಮಂತ್ರಿಗಳು ತಾಂತ್ರಿಕ ಸಮಿತಿಯನ್ನು ನೇಮಕ ಮಾಡಿ 15 ದಿನಗಳೊಳಗೆ ವರದಿಯನ್ನು ನೀಡಲು ಆದೇಶಿಸಿದ್ದರು. ರೇಷ್ಮೆ ಮೇಲಿನ ಆಮದು ಸುಂಕ ಏರಿಸಲು ಕೇಂದ್ರಕ್ಕೆ ನಿಯೋಗ ಹೋಗುವುದಾಗಿ ತಿಳಿಸಿದ್ದರು. ಆದರೆ ಭರವಸೆ ನೀಡಿ 50 ದಿನಗಳು ಕಳೆದರೂ ಯಾವುದೇ ಸಕಾರಾತ್ಮಕ ಬೆಳವಣಿಗೆಯಾಗಿಲ್ಲ. ಕೇಂದ್ರ ಸರ್ಕಾರವೂ ರೇಷ್ಮೆ ಕೃಷಿಕರ ನೆರವಿಗೆ ಬರುತ್ತಿಲ್ಲ. ರಾಜ್ಯದ ಸಂಸದರಾಗಲೀ, ಕೇಂದ್ರ ಸಚಿವರಾಗಲೀ ಕೇಂದ್ರದ ಗಮನ ಸೆಳೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ರೇಷ್ಮೆ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಕಳೆದ ನಾಲ್ಕು ತಿಂಗಳಿನಿಂದ ರೇಷ್ಮೆ ಕೃಷಿಕರಿಗೆ ಉಂಟಾಗಿರುವ ನಷ್ಟವನ್ನು ಪರಿಹಾರದ ರೂಪದಲ್ಲಿ ವಿತರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಂಡ ರೇಷ್ಮೆ ಕೃಷಿಕರು, ಒಂದು ತಿಂಗಳೊಳಗೆ ಯಾವುದೇ ಪರಿಹಾರ ಮಾರ್ಗ ಕಂಡುಹಿಡಿಯಲು ಮುಂದಾಗದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಯ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ರಾಮಕೃಷ್ಣಪ್ಪ, ಎಚ್.ಜಿ.ಗೋಪಾಲಗೌಡ, ತಾದೂರು ಮಂಜುನಾಥ್, ವೇಣುಗೋಪಾಲ್, ಎಚ್.ಸುರೇಶ್, ದೇವರಾಜ್, ರಾಮಾಂಜಿನಪ್ಪ, ನರಸಿಂಹಮೂರ್ತಿ, ಕೆಂಪಣ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -