ಇ–ಹರಾಜು ಪದ್ಧತಿಯಲ್ಲಿ ಸಾಕಷ್ಟು ಅನುಕೂಲಗಳಿದ್ದು ಅದನ್ನೇ ಮುಂದುವರಿಸಲಾಗುತ್ತದೆ. ಕೆಲವು ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಸರಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪದ್ಧತಿಯಲ್ಲಿ ಕೆಲವು ತಾಂತ್ರಿಕ ದೋಷದಿಂದಾಗಿ ಸೋಮವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೆಲವರು ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಎಂ.ರಾಜಣ್ಣ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ರೈತರು, ರೀಲರುಗಳು ಮತ್ತು ಅಧಿಕಾರಿಗಳೊಂದಿಗೆ ಇ–ಹರಾಜು ಪದ್ಧತಿಯ ಕುರಿತಂತೆ ಚರ್ಚಿಸಿ ಮಾಹಿತಿಯನ್ನು ಪಡೆದಿರುವೆ. ರೈತರು ಈ ಹಿಂದೆ ರೇಷ್ಮೆ ಗೂಡನ್ನು ತುಂಬಿಸಲು ಜಾಲರಿಗಳನ್ನು ಮುಂಚಿತವಾಗಿಯೇ ಹಣ ನೀಡಿ ಹಿಡಿದಿಡಬೇಕಿತ್ತು. ಈಗ ಆ ಕಷ್ಟ ತಪ್ಪಿದೆ. ಉತ್ತಮ ಗುಣಮಟ್ಟದ ರೇಷ್ಮೆ ಗೂಡಿಗೆ ಸೂಕ್ತವಾದ ಬೆಲೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ನಿಜವಾದ ರೀಲರುಗಳು ಮಾತ್ರ ಇ–ಹರಾಜಿನಲ್ಲಿ ಭಾಗವಹಿಸಬಹುದಾಗಿದ್ದು, ಸರ್ಕಾರದ ಸಹಾಯಧನ ಪೋಲಾಗುವುದಿಲ್ಲವೆಂದು ರೀಲರುಗಳು ಹೇಳಿದ್ದಾರೆ. ಅಧಿಕಾರಿಗಳಿಗೆ ತಾಂತ್ರಿಕ ಲೋಪದೋಷಗಳು ಸರಿಪಡಿಸಿಕೊಂಡು ಕಾರ್ಯನಿರ್ವಹಿಸಲು ಸೂಚಿಸಿದ್ದೇವೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಏಷ್ಯಾದಲ್ಲೇ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎಂಬ ಖ್ಯಾತಿಯನ್ನು ಪಡೆದಿರುವ ನಮ್ಮ ರೇಷ್ಮೆ ಗೂಡಿನ ಮಾರುಕಟ್ಟೆಯೂ ತಾಂತ್ರಿಕ ಯುಗದಲ್ಲಿ ಇ–ಹರಾಜನ್ನು ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದರಿಂದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ಭ್ರಷ್ಟಾಚಾರ ತಡೆಯಬಹುದು. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದರು.
ರೈತರಾದ ಅಬ್ಲೂಡು ಆರ್.ದೇವರಾಜ್, ರೀಲರುಗಳಾದ ಎ.ಆರ್.ಅಬ್ದುಲ್ ಅಜೀಜ್, ರಾಮಕೃಷ್ಣಪ್ಪ, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -