ರೈತರ ಬವಣೆಗಳನ್ನು ಆಲಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಖಂಡಿಸಿ ಜೂನ್ 26 ರ ಶುಕ್ರವಾರ ಚಿಕ್ಕಬಳ್ಳಾಪುರದ ಸಿಟಿಜನ್ ಕ್ಲಬ್ನಿಂದ ಪಾದಯಾತ್ರೆ ಹೊರಟು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರೈತ ಸಂಘದ ಸದಸ್ಯರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆ ಸೇರಿದ್ದ ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು ರೈತರ ಸಮಸ್ಯೆಗಳನ್ನು ಬಗೆ ಹರಿಸದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಯಲು ಸೀಮೆ ಜಿಲ್ಲೆಗಳಲ್ಲಿ ಶೇ. 80 ರಷ್ಟು ರೈತರು ರೇಷ್ಮೆ ಕೃಷಿಯನ್ನು ಅವಲಂಭಿಸಿದ್ದಾರೆ. ಆದರೆ 350 ರಿಂದ 400 ರೂ ಇದ್ದ ರೇಷ್ಮೆ ಗೂಡಿನ ಬೆಲೆ 150 ರಿಂದ 200 ರೂಗಳಿಗೆ ಕುಸಿದಿದೆ. ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕ ಕಡಿತಗೊಳಿಸಿರುವುದರಿಂದ ರೇಷ್ಮೆ ನಂಬಿ ಬದುಕುವವರು ಬೀದಿ ಪಾಲಾಗುವಂತಾಗಿದೆ. ಕೃಷಿ ತ್ಯಜಿಸಿ ನಗರಗಳಿಗೆ ವಲಸೆ ಹೋಗುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಶೇ. 30 ರಷ್ಟು ಮಾಡಬೇಕು. ರೇಷ್ಮೆ ಗೂಡಿಗೆ ಬೆಂಬಲ ಬಲ ನೀಡಬೇಕು ಮತ್ತು ರೇಷ್ಮೆ ಕೃಷಿಗೆ ಸಂಬಂಧಿಸಿದ ಸಹಾಯಧನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನಿಟ್ಟಿರುವುದಾಗಿ ತಿಳಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಕುಮಾರ್, ನಾಗರಾಜ್, ಬಾಲಮುರಳಿಕೃಷ್ಣ, ಭಕ್ತರಹಳ್ಳಿ ಪ್ರತೀಶ್, ನಾಗೇಶ್, ಮುನಿರಾಜು, ಕರ್ನಾಟಕ ರಕ್ಷಣಾ ವೇದಿಕೆ(ಶಿವಕುಮಾರ ಗೌಡ ಬಣ) ಹಾಗೂ ಕರ್ನಾಟಕ ಜನಪರ ವೇದಿಕೆ ಸದಸ್ಯರು ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -