ವಕೀಲರ ವೃತ್ತಿಗೆ ಗರಿಷ್ಠ ವಯೋಮಿತಿಯನ್ನು ಕಡ್ಡಾಯಗೊಳಿಸಿ ಕಾನೂನ್ನು ಜಾರಿಗೆ ತರಬೇಕಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಕೀಲರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಜನ ಜೀವನ ಬದುಕಿನ ಶೈಲಿ ಬದಲಾಗಿದ್ದು ಅಪರಾಧ ಪ್ರಕರಣಗಳೂ ಕೂಡ ವಿಭಿನ್ನವಾಗಿವೆ. ಸಣ್ಣ ಪುಟ್ಟದಕ್ಕೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇಂತಹ ಬಿಕ್ಕಟಿನ ಸಮಯದಲ್ಲಿ ಯುವ ವಕೀಲ ಸಮುದಾಯ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕಿದೆ. ಹಿರಿಯ ವಯಸ್ಸಿನ ವಕೀಲರು ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲು ಅವರ ವಯಸ್ಸು ಅಡ್ಡಿಬರಲಿದೆ. ಇದರಿಂದ ಕಕ್ಷಿದಾರರಿಗೆ ನ್ಯಾಯದಾನ ಒದಗಿಸಲು ಕೂಡ ಅವರಿಂದ ಸಾಧ್ಯವಾಗದಿರಬಹುದು. ಹಾಗಾಗಿ ವಕೀಲಿ ವೃತ್ತಿ ಮಾಡುವವರಿಗೆ ಗರಿಷ್ಠ ೬೫ ವರ್ಷದ ವಯೋಮಿತಿಯನ್ನು ನಿಗದಿಗೊಳಿಸಿ ಕಾನೂನಿಗೆ ತಿದ್ದುಪಡಿತರುವಂತೆ ಆಗ್ರಹಿಸಿದರು.
ಇತ್ತೀಚೆಗೆ ರಾಜ್ಯ ವಕೀಲರ ಪರಿಷತ್ನಲ್ಲಿ ನಕಲಿ ದಾಖಲೆಗಳನ್ನು ಹಾಜರುಪಡಿಸಿ ವಕೀಲರು ತಮ್ಮ ಹೆಸರನ್ನು ನೋಂದಾಯಿಸಿರುವ ಪ್ರಕರಣ ಬಯಲಾಗಿದ್ದು ಈಗಾಗಲೇ ಅವರ ವಿರುದ್ದ ವಂಚನೆ, ಸುಳ್ಳು ದಾಖಲೆಗಳನ್ನು ಸಲ್ಲಿಕೆ ಮಾಡಿದ ಪ್ರಕರಣ ದಾಖಲಿಸಲಾಗಿದೆ. ಇತರೆ ಇನ್ನೂ ಹಲವು ಮಂದಿ ಇದೆ ರೀತಿ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಬಗ್ಗೆ ಅನುಮಾನಗಳಿದ್ದು ಪರಿಷತ್ನ ಅಧ್ಯಕ್ಷರು ಈಗಾಗಲೆ ಅಂತಹವರ ಪತ್ತೆಗಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದರು.
ವಕೀಲರ ಮೇಲೆ ಕಕ್ಷಿದಾರರಿಗೆ ನ್ಯಾಯದಾನ ಒದಗಿಸುವ ನಂಬಿಕೆ ಇರಬೇಕು. ಆ ರೀತಿ ವಕೀಲರ ಕಾರ್ಯಚಟುವಟಿಕೆಗಳು ಇರಬೇಕು. ದೇಶದಲ್ಲಿ ೧೯ ವಕೀಲರ ಪರಿಷತ್ಗಳಿದ್ದು ರಾಜ್ಯದಲ್ಲಿ ೭೦ ಸಾವಿರಕ್ಕೂ ಹೆಚ್ಚು ವಕೀಲರು ನೋಂದಾಯಿಸಿಕೊಂಡಿದ್ದಾರೆ. ವಕೀಲರ ಸನ್ನದ್ದನ್ನು ಜಾರಿಗೊಳಿಸಿ ೫೩ ವರ್ಷಗಳಾಗಿದ್ದು ಈ ದಿನವನ್ನು ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಉದ್ದಗಲಕ್ಕೂ ಲಕ್ಷಾಂತರ ವಕೀಲರು ಇದ್ದು ಕೇವಲ ವಕೀಲಿಕೆ ಮಾಡುವುದರ ಬದಲಿಗೆ ಮಾನವೀಯತೆ ದೃಷ್ಟಿಯಿಂದ ಹಾಗೂ ಸಾಮಾಜಿಕ ಕಳಕಳಿಯಿಂದಲೂ ಕಾರ್ಯನಿರ್ವಹಿಸುವಂತೆ ವಕೀಲರಲ್ಲಿ ಮನವಿ ಮಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ್ ಅರಸ್, ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ಎಸ್.ಕುಮುದಿನಿ, ವಕೀಲರ ಸಂಘದ ಪದಾಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -
- Advertisement -