ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಹರು ಯುವಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ವಲ್ಲಭಬಾಯಿ ಪಟೇಲರ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾದಿವಸ್ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿದರು.
ಸರ್ದಾರ್ ವಲ್ಲಭಬಾಯಿ ಪಟೇಲರದ್ದು ಮೇರುವ್ಯಕ್ತಿತ್ವವಾಗಿದ್ದು, ಏಕತೆಯ ಹರಿಕಾರರೂ, ಉಕ್ಕಿನಂತಹ ದೃಡತೆಯುಳ್ಳ ಮನುಷ್ಯರಾಗಿದ್ದರು. ಅವರ ಸ್ತುತಿ ಇಂದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ತಂದುಕೊಡುವಲ್ಲಿ ಪಟೇಲರ ಕೊಡುಗೆ ಅಪಾರವಾದುದು, ವಕೀಲಿವೃತ್ತಿಯ ಘನತೆ, ಗೌರವ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಸರಳಜೀವನ, ಕಷ್ಟಕಾರ್ಪಣ್ಯಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಪಟೇಲರು ಮದ್ಯಪಾನ, ಅಸೃಶ್ಯತೆ, ಬಡತನ, ಅಜ್ಞಾನದ ವಿರುದ್ಧ ವ್ಯಾಪಕ ಚಳವಳಿ ನಡೆಸಿದರು. ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ, ಆಡಳಿತರಂಗದಲ್ಲಿ ಅಧಿಕ ಅನುಭವ ಹೊಂದಿದ್ದರು. ವಿದ್ಯುತ್ ಸರಬರಾಜು, ನೈರ್ಮಲ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದರು ಎಂದು ವಿವರಿಸಿದರು.
ನವದೆಹಲಿಯ ರಾಷ್ಟ್ರೀಯ ಯುವಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಭಾರತೀಯ ರಾಜಕೀಯ ಏಕೀಕರಣ ಕಾರ್ಯ ಕೈಗೊಳ್ಳುವ ಮನಃಸ್ಥೈರ್ಯ, ಚಾಣಾಕ್ಷತನ, ಅಚಲತೆಯನ್ನು ಪಟೇಲರು ಹೊಂದಿದ್ದರು. ನಾಗರೀಕ ಸ್ವಾತಂತ್ರ್ಯದ ರೂಪುರೇಷೆಗಳನ್ನು ನಿರ್ಧರಿಸುವಲ್ಲಿ, ರಾಷ್ಟ್ರೀಕೃತ ಸಿವಿಲ್‌ಸರ್ವೀಸ್‌ನ್ನು ಬೆಂಬಲಿಸುವಲ್ಲಿ ಅವರು ತೋರಿದ ಕಾಳಜಿಯು ಅಪಾರವಾದುದು ಎಂದು ವಿವರಿಸಿದರು.
ವಿದ್ಯಾರ್ಥಿಗಳಿಗೆ ನುಡಿಮುತ್ತುಗಳ ಕಿರುಹೊತ್ತಿಗೆ, ಉಚಿತ ಪೆನ್ನುಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗಾಗಿ ವಲ್ಲಭಬಾಯಿಪಟೇಲ್ ಜೀವನಚರಿತ್ರೆ ಕುರಿತಾದ ಪ್ರಬಂಧ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಶಿಕ್ಷಕರಾದ ಎಚ್.ಎಸ್.ರುದ್ರೇಶಮೂರ್ತಿ, ಎ.ಬಿ.ನಾಗರಾಜು ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ಎಂ.ದೇವರಾಜು, ದೊಡ್ಡಮುನಿವೆಂಕಟಶೆಟ್ಟಿ, ಎನ್.ಪಿ.ನಾಗರಾಜಪ್ಪ, ಮುಖ್ಯಶಿಕ್ಷಕಿ ಉಮಾದೇವಿ, ರಾಷ್ಟ್ರೀಯ ಯುವಯೋಜನೆ ಸ್ವಯಂಸೇವಕ ಪ್ರವೇಶ್, ಬೋಧಕವರ್ಗದವರು ಹಾಜರಿದ್ದರು.
- Advertisement -
- Advertisement -
- Advertisement -