ನಗರದ ವಸತಿರಹಿತ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ರಾಜಕೀಯ ಬೆರೆಸದೇ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ನಗರಸಭೆ ಸದಸ್ಯರೂ ಸೇರಿದಂತೆ ಅಧಿಕಾರಿಗಳು ಸಹಕರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ವಾಜಪೇಯಿ ನಗರ ವಸತಿ ಯೋಜನೆಯಡಿ ನಿಗಧಿಪಡಿಸಿರುವ ೨೦೦ ಮನೆಗಳ ಗುರಿಗೆ ಅನುಗುಣವಾಗಿ ಕಾರ್ಯಾದೇಶ ವಿತರಿಸುವ ಹಾಗು ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಸುಸಜ್ಜಿತ ನಗರಸಭೆ ಕಾರ್ಯಾಲಯ ಕಟ್ಟಡ ಕಟ್ಟಲು ಈಗಾಗಲೇ ಸಿದ್ಧತೆಗಳು ನಡೆದಿದೆ. ನಗರದಲ್ಲಿ ಸುಮಾರು ೫೫ ಸಾವಿರ ಜನಸಂಖ್ಯೆಯಿದ್ದು ಎಲ್ಲರಿಗೂ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಹೆಚ್ಚಿನ ಅನುಧಾನದ ಅಗತ್ಯತೆಯಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ನಗರಸಭೆಯಿಂದ ಜನರಿಗೆ ಉತ್ತಮ ಸೇವೆ ಸಿಗುವಂತಾಗಬೇಕಾದರೆ ನಗರಸಭೆಗೆ ಆದಾಯವೂ ಹೆಚ್ಚಾಗಬೇಕು ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ತಮ್ಮ ತಮ್ಮ ವಾರ್ಡುಗಳ ಜನರಿಗೆ ಕಂದಾಯ, ನೀರಿನ ಬಿಲ್ ಹಾಗು ವಾಣಿಜ್ಯ ಮಳಿಗೆಗಳ ಬಾಡಿಗೆ ಹಣವನ್ನು ಕಟ್ಟುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ವಾಜಪೇಯಿ ನಗರ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ೬೦, ಪರಿಶಿಷ್ಟ ಪಂಗಡ ೨೦, ಅಲ್ಪಸಂಖ್ಯಾತರಿಗೆ ೨೦, ಸಾಮಾನ್ಯ ೧೦೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆರ್.ಜಿ.ಆರ್.ಎಚ್.ಸಿ,ಎಲ್ ಮುಖಾಂತರ ತೆರೆಯಲಾಗಿದೆ. ಸದರಿ ಮನೆ ನಿರ್ಮಾಣ ಕಾಮಗಾರಿಗೆ ೪ ಹಂತಗಳಲ್ಲಿ, ತಳಪಾಯ ನಿರ್ಮಾಣಕ್ಕೆ ೩೦,೦೦೦, ಗೋಡೆಹಂತದಲ್ಲಿ ೩೦,೦೦೦, ಮೇಲ್ಚಾವಣಿ ಹಂತದಲ್ಲಿ ೩೦,೦೦೦ ಹಾಗೂ ಮನೆ ಪೂರ್ಣಗೊಂಡಲ್ಲಿ ೩೦,೦೦೦ ರೂಗಳನ್ನು ಫಲಾನುಭವಿಗಳ ಖಾತೆಗೆ ಜಿ.ಪಿ.ಎಸ್ ಛಾಯಾ ಚಿತ್ರವನ್ನು ತೆಗೆದ ನಂತರ ಬಿಡುಗಡೆ ಮಾಡಲಾಗುವುದೆಂದು ನಗರಸಭೆ ಆಯುಕ್ತ ಎಚ್.ಎ.ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿನಿತ್ಯ ನಗರವನ್ನು ಸುಂದರವನ್ನಾಗಿಸುವ ಸಲುವಾಗಿ ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತರಾಗುವ ಪೌರಕಾರ್ಮಿಕರು ಬೆಳಗ್ಗೆ ಬೇಗ ಬಂದು ಕರ್ತವ್ಯ ನಿರ್ವಹಿಸುವುದರಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅದ್ಯಕ್ಷೆ ಮುಷ್ಟರಿ ತನ್ವೀರ್, ಉಪಾದ್ಯಕ್ಷೆ ಸುಮಿತ್ರಾ ರಮೇಶ್, ಪೌರಾಯುಕ್ತ ಎಚ್.ಎ.ಹರೀಶ್, ನಗರಸಭಾ ಸದಸ್ಯರಾದ ಪ್ರಭಾವತಿ ಸುರೇಶ್, ಅಫ್ಸರ್ಪಾಷ, ಲಕ್ಷ್ಮಯ್ಯ, ವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -