ತಾಲ್ಲೂಕಿನಾದ್ಯಂತ ಬುಧವಾರ ವಾಲ್ಮೀಕಿ ಮಹರ್ಷಿ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲ್ಲೂಕಿನ ಮಸ್ತಕಾಚಲ, ತಲಕಾಯಲಬೆಟ್ಟ, ತಲೆಕಾಯ್ದಬೆಟ್ಟ, ತಲಕಾಚಿನಕೊಂಡ ಮುಂತಾದ ಹೆಸರಿನಿಂದ ಕರೆಯಲ್ಪಡುವ ತಲಕಾಯಲಬೆಟ್ಟದಲ್ಲಿಯೇ ಪುರಾತನ ಕಾಲದಲ್ಲಿ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ಮಹರ್ಷಿ ಜನಿಸಿದ ಹಾಗೂ ಬಾಲ್ಯ ಯೌವನವನ್ನು ಕಳೆದನೆಂಬ ಪ್ರತೀತಿಯಿದೆ. ತಲಕಾಯಲಬೆಟ್ಟದಲ್ಲಿರುವ ವಾಲ್ಮೀಕಿ ಮಹರ್ಷಿಯ ಗುಹೆ ಮತ್ತು ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ಮಹರ್ಷಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
‘ಪ್ರಪಂಚವಿರುವವರೆಗೂ ಉಳಿಯುವಂತಹ ಮಹಾಕಾವ್ಯ ರಾಮಾಯಣ. ಮಹರ್ಷಿ ವಾಲ್ಮೀಕಿ ರಚಿಸಿರುವ ಈ ಮಹಾಕಾವ್ಯದಲ್ಲಿರುವ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಮಯೂರ ವೃತ್ತದ ಬಳಿಯಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆಯನ್ನು ನೆರವೇರಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು.
[lightbox thumb=”http://www.sidlaghatta.com/wp-content/uploads/2014/10/8oct2.jpg”]ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ಟ್ರಾಕ್ಟರ್ ಮತ್ತು ಟೆಂಪೋಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಸಾಗಿದರು. ಮಕ್ಕಳು ಮತ್ತು ದೊಡ್ಡವರು ವಾಲ್ಮೀಕಿ, ಸೀತೆ, ರಾಮ, ಲಕ್ಷ್ಮಣ, ಲವ, ಕುಶ ಮುಂತಾದ ವಿವಿಧ ಪೌರಾಣಿಕ ವೇಷಧಾರಿಗಳಾಗಿ ಎಲ್ಲರನ್ನೂ ಆಕರ್ಷಿಸಿದರು. ಗಾರಡಿ ಬೊಂಬೆಗಳು, ಮಹಿಳಾ ಡೊಳ್ಳು ಕುಣಿತದ ತಂಡ ಮತ್ತಿತರ ವೇಷಧಾರಿಗಳು ಜನರನ್ನು ರಂಜಿಸಿದರು.
ಜಿಲ್ಲಾ ವಾಲ್ಮೀಕಿ ಸಭಾ ಅಧ್ಯಕ್ಷ ಬಂಕ್ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಭಾರಿ ಗಣಪತಿ ಸಾಕರೆ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್.ಮುನಿಯಪ್ಪ, ರಾಜೇಂದ್ರ, ಮಂಜುನಾಥ್, ಓ.ಟಿ.ಕೃಷ್ಣಪ್ಪ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -