19.5 C
Sidlaghatta
Sunday, July 20, 2025

ವಾಸವಿ ಕಲ್ಯಾಣಮಂಟಪದಲ್ಲಿ ಏಳನೇ ಸಾಹಿತ್ಯ ಸಮ್ಮೇಳನ

- Advertisement -
- Advertisement -

ತಾಲ್ಲೂಕಿನಲ್ಲಿ ಸಾಧಕರು ಅನೇಕ ಮಂದಿಯಿದ್ದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ರಂಗಮಂದಿರ ಇಲ್ಲದಿರುವುದು ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಇದ್ದರೂ ಒಳಾಂಗಣ ಕ್ರೀಡಾಂಗಣ ಇಲ್ಲದಿರುವುದು ನಮ್ಮ ತಾಲ್ಲೂಕಿಗೇ ಕಪ್ಪುಚುಕ್ಕೆಯಾಗಿದೆ. ಇದನ್ನು ಮನಗಂಡು ರಾಜಕೀಯ ನಾಯಕರು ಹಾಗೂ ಇಲಾಖೆಯವರು ಗಮನ ಹರಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಏಳನೇ ಕಸಾಪ ಸಮ್ಮೇಳನಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌ ಒತ್ತಾಯಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಏಳನೇ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಲ್ಲ. ಭಿನ್ನಾಭಿಪ್ರಾಯಗಳನ್ನು ಮರೆತು ನಾವೆಲ್ಲ ಒಂದೆ ಎಂಬ ಮನೋಭಾವನೆ ಬೆಳೆಸುವ ವೇದಿಕೆಯಿದು. ಕನ್ನಡಕ್ಕೆ ಒತ್ತನ್ನು ಕೊಟ್ಟು ‘ಕನ್ನಡ ಸಾಹಿತ್ಯ ಸಮ್ಮೇಳನ’ ಎನ್ನುವ ಬದಲು, ’ಕನ್ನಡ ಸಮ್ಮೇಳನ’ ಎಂದು ಕರೆಯಬೇಕು.
ದಕ್ಷ ಶಿಕ್ಷಕರ ಕೊರತೆ ದೊಡ್ಡ ಸಮಸ್ಯೆ ಆಗಿದೆ. ಸಮರ್ಥ ಶಿಕ್ಷಕರನ್ನು ಸೃಷ್ಟಿಸಬೇಕಾಗಿದೆ. ಕನ್ನಡ ಬೋಧನೆಯಲ್ಲಿ ಸರಿಯಾದ ಮಾರ್ಗವನ್ನು ಕಲಿಸುವ ಶಿಬಿರಗಳನ್ನು ನಡೆಸಿ, ಕನ್ನಡದ ಬಗ್ಗೆ ಶಿಕ್ಷಕರಲ್ಲಿ ಪ್ರೀತಿ ಹೆಚ್ಚಿಸಬೇಕು.
ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ ಎನ್ನುವುದೊಂದು ಮೂಲಭೂತ ಸಮಸ್ಯೆ. ಕಾಲೆಳೆಯುವ ಪ್ರವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಿದ್ರಿಸುವಂತೆ ನಟಿಸುವವರು ಹೆಚ್ಚಾಗಿದ್ದಾರೆ. ಅನ್ಯಭಾಷೆಗೆ ಮಾರು ಹೋಗಿದ್ದಾರೆ. ಇವೆಲ್ಲವುಗಳಿಂದ ಹೊರಬರಲು ಕಾರ್ಯೋನ್ಮುಖರಾಗಬೇಕಾಗಿದೆ.
ಇತ್ತೀಚಿನ ಶಿಕ್ಷಣ ವ್ಯವಸ್ಥೆಯಿಂದ ಕನ್ನಡವೂ ಸರಿಯಾಗಿ ಬಾರದ ಸರಿಯಾಗಿ ಆಂಗ್ಲ ಭಾಷೆಯೂ ಬಾರದ ಸ್ಥಿತಿಯಲ್ಲಿದ್ದಾರೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಮುಂದೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಂಕಾಗಿ ತಲೆತಗ್ಗಿಸಿ ನಿಂತಿವೆ. ಇದರಿಂದ ಮೇಲು-ಕೀಳು ಎಂಬ ಭಾವನೆ ಬೆಳೆಯಲು ಸಹಾಯವಾಗುತ್ತಿದೆ. ಇವೆಲ್ಲದುದರಿಂದ ಹೊರಗೆ ಬಂದು ’ಸಮಾನ ಶಿಕ್ಷಣ’ ಸಿದ್ದಿಸುವಂತಾಗಬೇಕಾಗಿದೆ.
ಈಗ ಅನೇಕ ಹಳ್ಳಿಗಳಲ್ಲಿ ಕನ್ನಡದ ಬೇರು ಸಡಿಲವಾಗುತ್ತಿದೆ. ಸರ್ಕಾರಗಳು ವಿದ್ಯಾರ್ಥಿಗಳ ಸಂಖ್ಯೆಯನ್ನು ಮುಂದಿಟ್ಟುಕೊಂಡು ಕನ್ನಡ ಶಾಲೆಗಳನ್ನು ಮುಚ್ಚುವುದು ಬಿಟ್ಟು ಆ ಶಾಲೆಗಳಿಗೆ ಬೇಕಾದ ಅನುಕೂಲಗಳನ್ನು ಹೆಚ್ಚಿಸಿ ಮಕ್ಕಳನ್ನು ಹಾಗೂ ಪಾಲಕರನ್ನು ಆಕರ್ಷಿಸುವ ಗುರಿ ಹೆಚ್ಚಿಸಿಕೊಳ್ಳಬೇಕಾಗಿದೆ.
ಕೆಲವು ವಾಹಿನಿಗಳಲ್ಲಿ ಯುವಕ ಯುವತಿಯರನ್ನು ಅಡ್ಡದಾರಿಗೆ ದೂಡುವ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಅನೇಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆ ಮಸಾಲೆ ಭಾಷೆಯಾಗಿ ರೂಪುಗೊಳ್ಳುತ್ತಿದೆ. ಇದರಿಂದ ಅಚ್ಚ ಕನ್ನಡ ಮಾಯವಾಗುತ್ತಿರುವುದು ದುಃಖಕರ ಸಂಗತಿಯಾಗಿದೆ. ಕನ್ನಡ ನಾಟಕಗಳನ್ನಾಡುವ ತಂಡಗಳೇ ಇಲ್ಲವಾಗಿದೆ. ಗ್ರಂಥಾಲಯಗಳಿಗೆ ಭೇಟಿ ಕೊಡುವ ಪ್ರವೃತ್ತಿ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಆಸ್ಪತ್ರೆ ಮುಂತಾದ ಸ್ಥಳಗಳಲ್ಲಿ ಪತ್ರಿಕೆಗಳ ಹಾಗೂ ಪುಸ್ತಕಗಳ ಭಂಡಾರವನ್ನು ತೆರೆದು, ರೋಗಿಗಳು ಹಾಗೂ ಅವರಿಗೆ ಸಹಕಾರ ನೀಡಲು ಬಂದವರಿಗೆ ಓದಲು ಅವಕಾಶ ಮಾಡಿದರೆ ಒಂದು ಹೆಜ್ಜೆ ಮುಂದೆ ಇಟ್ಟಂತಾಗುತ್ತದೆ ಎಂದು ಹೇಳಿದರು.
ಬೆಳಿಗ್ಗೆ ಶಾಸಕ ಎಂ.ರಾಜಣ್ಣ ರಾಷ್ಟ್ರ ಧ್ವಜಾರೋಹಣವನ್ನು, ಸಮ್ಮೇಳನಾಧ್ಯಕ್ಷ ಎಸ್.ವಿ.ನಾಗರಾಜರಾವ್ ನಾಡಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಪರಿಷತ್ತಿನ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಗರದ ಬಸ್‌ನಿಲ್ದಾಣದಿಂದ ವಾಸವಿ ಕಲ್ಯಾಣಮಂಟಪದವರೆಗೂ ಆಯೋಜಿಸಲಾಗಿತ್ತು. ಶಾಲೆಗಳ ವಾದ್ಯವೃಂದ, ಕಳಶ ಹೊತ್ತ ಮಹಿಳೆಯರು, ವೀರಗಾಸೆ, ಗಾರುಡಿ ಗೊಂಬೆ ಮೆರವಣಿಗೆಯಲ್ಲಿದ್ದವು.
ಸಮ್ಮೇಳನಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌ ರಚಿಸಿರುವ ಕವನ ಸಂಕಲನ ಹೃದಯಾಮೃತ ಮತ್ತು ಸಮ್ಮೇಳನಾಧ್ಯಕ್ಷರ ಭಾಷಣದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್‌, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಅಮೃತಕುಮಾರ್‌, ಹನುಮಂತರಾವ್‌, ಸಿಡಿಪಿಒ ಲಕ್ಷ್ಮೀದೇವಮ್ಮ, ಎನ್‌.ಶಿವಣ್ಣ, ಸಿ.ಪಿ.ಈ.ಕರಗಪ್ಪ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!