ಕೇಂದ್ರ ರೇಷ್ಮೆ ಮಂಡಳಿಯ ಶಾಖಾ ಕಚೇರಿಗೆ 2003 ರಲ್ಲಿ ವಿಜ್ಞಾನಿ ಮಹೇಶ್ ಅವರು ಬಂದ ಮೇಲೆ ರೇಷ್ಮೆ ನೂಲಿನ ಗುಣಮಟ್ಟವನ್ನು ಪರೀಕ್ಷಿಸಿ ಖಾತ್ರಿ ಪಡಿಸುವ ಕೆಲಸ ವ್ಯವಸ್ಥಿತವಾಗಿ ಪ್ರಾರಂಭವಾಗಿ ನಮ್ಮ ನೂಲಿನ ಗುಣಮಟ್ಟ ತಿಳಿಯುವಂತಾಯಿತು ಎಂದು ರೇಷ್ಮೆ ಬಿಚ್ಚಾಣಿಕೆದಾರ ಅನ್ವರ್ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಮೊಟ್ಟೆ ಕೋಠಿಯಲ್ಲಿನ ಕೇಂದ್ರ ರೇಷ್ಮೆ ಮಂಡಳಿ ಕಚೇರಿಯಲ್ಲಿ ಬುಧವಾರ ವಿಜ್ಞಾನಿ ಮಹೇಶ್ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಆಧಾರದಲ್ಲಿ ನಮ್ಮ ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗುವಂತಾಯಿತು. ಇದೆಲ್ಲದರ ಹಿಂದೆ ವಿಜ್ಞಾನಿ ಮಹೇಶ್ ಅವರ ಪರಿಶ್ರಮ ಅಡಗಿದೆ ಎಂದು ಮಹೇಶ್ ಅವರ ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದರು.
ಡಾ.ಮಹೇಶ್ ಅವರು ಬೆಂಗಳೂರಿನ ಮಡಿವಾಳದಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನಾ ಮಂಡಳಿಗೆ ಪದೋನ್ನತಿಯೊಂದಿಗೆ ವರ್ಗಾವಣೆ ಆಗಿದ್ದಾರೆ. ಅವರು ಎಲ್ಲಿಗೆ ಹೋದರು ಅವರ ಸೇವೆ ರೇಷ್ಮೆ ಕ್ಷೇತ್ರಕ್ಕೆ ಸಿಗಲಿದೆ, ಹಾಗೆಯೆ ಇದೀಗ ಅವರ ಸ್ಥಾನಕ್ಕೆ ಆಗಮಿಸಿರುವ ತಿಮ್ಮಣ್ಣರೆಡ್ಡಿ ಅವರಿಂದಲೂ ಅಂತಹ ಸೇವೆ ಸಿಗಲಿದೆ ಎಂದು ಆಶಿಸುತ್ತೇವೆ ಎಂದರು.
ಪದೋನ್ನತಿಯೊಂದಿಗೆ ವರ್ಗಾವಣೆಗೊಂಡ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ಮಹೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅವರ ಸ್ಥಾನಕ್ಕೆ ಆಗಮಿಸಿದ ತಿಮ್ಮಣ್ಣರೆಡ್ಡಿ ಅವರನ್ನು ಬರ ಮಾಡಿಕೊಳ್ಳಲಾಯಿತು.
ರೇಷ್ಮೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ಸಹಾಯಕ ನಿರ್ದೆಶಕ ಎಸ್.ಭೋಜಣ್ಣ, ವಿಸ್ತರಣಾಧಿಕಾರಿ ರಾಮಕೃಷ್ಣಪ್ಪ, ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ರಾಮ್‌ಕುಮಾರ್, ನರಸಿಂಹಮೂರ್ತಿ, ರಮೇಶ್‌ಬಾಬು, ಅನಿಲ್ ಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಗುರುರಾಜ್, ರೇಷ್ಮೆ ರೈತರ ಕಂಪನಿಯ ಸಿಇಒ ಜನಾರ್ಧನಮೂರ್ತಿ, ಬಿ.ನಾರಾಯಣಸ್ವಾಮಿ, ವೈ.ರಾಮಕೃಷ್ಣಪ್ಪ, ಅನಂತಪದ್ಮನಾಭ ಹಾಜರಿದ್ದರು.
- Advertisement -
- Advertisement -
- Advertisement -