ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು, ವಿಜ್ಞಾನದ ಪ್ರಯೋಗಗಳ ಮೂಲಕ ಅವರ ಆಲೋಚನೆಯ ದಿಕ್ಕನ್ನು ಬದಲಿಸುವುದು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಪಠ್ಯ ಮತ್ತು ಪಠ್ಯೇತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡುವ ಉದ್ದೇಶದಿಂದ ವಿಜ್ಞಾನ ಮೇಳವನ್ನು ಆಯೋಜಿಸಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿ.ವೈ.ಪಿ.ಸಿ.ಆರ್.ಎಂ.ಎಸ್.ಎ ಮಂಜುನಾಥ್ ತಿಳಿಸಿದರು.
ನಗರದ ವಾಸವಿ ಶಾಲೆಯ ಆವರಣದಲ್ಲಿ ಗುರುವಾರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎರಡು ದಿನಗಳ ಕಾಲ ವಿವಿಧ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಹಾ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪಠ್ಯಕ್ಕೆ ಪೂರಕವಾದ ಈ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಆಗಿದೆ. ಮುಂದಿನ ಕಲಿಕೆಗೆ ಇದು ಇಂಬು ನೀಡುವ ಕಾರ್ಯಕ್ರಮ ಆಗಿದೆ. ಆಡುತ್ತಾ ಕಲಿಯುವ ಸನ್ನಿವೇಶ ಇಲ್ಲಿದೆ. ಸಂವಾದ, ಆರೋಗ್ಯದ ಕುರಿತಂತೆ ಅರಿವು, ಕಡಿಮೆ ವೆಚ್ಚದ ಮಾದರಿಗಳ ಘಟಕ, ಔಷದೀಯ ಸಸ್ಯಗಳ ಮಾಹಿತಿ, ಸೌರಶಕ್ತಿಯ ಘಟಕದ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಶಾಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದರು. ಸಣ್ಣ ಸಣ್ಣ ಗುಂಪುಗಳಲ್ಲಿ ಕುಳಿತು ವೈವಿದ್ಯಮಯ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಪ್ರತಿ ತಂಡಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಕರು ಇದ್ದರು.
ವಿಜ್ಞಾನ ಮೇಳದಲ್ಲಿ ಮಕ್ಕಳಿಗೆ ವೈಜ್ಞಾನಿಕ ದೃಷ್ಟಿಕೋನ, ಸೃಜನಶೀಲತೆ, ಪ್ರಶ್ನೆ ಕೇಳುವ ಮನೋಭಾವ, ಆರೋಗ್ಯ, ನೈರ್ಮಲ್ಯ, ಪರಿಸರ ಪ್ರೇಮ, ವಿಜ್ಞಾನದ ಮಾದರಿಗಳನ್ನು ತಯಾರಿಸುವುದು, ವೈಜ್ಞಾನಿಕ ತಳಹದಿ ಮೇಲೆ ಮನರಂಜನೆ ನೀಡುವ ಆಟಿಕೆಗಳನ್ನು ತಯಾರಿಸುವುದು ಇವುಗಳ ಬಗ್ಗೆ ತರಬೇತಿ ನೀಡಲಾಯಿತು. ಇದರೊಂದಿಗೆ ಮಕ್ಕಳು ತಯಾರಿಸಿ ತಂದ ವೈಜ್ಞಾನಿಕ ಮಾದರಿಗಳ ಪ್ರದರ್ಶನವನ್ನೂ ನಡೆಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಸುಮಾ, ಶಿಕ್ಷಣ ಇಲಾಖೆಯ ಲಕ್ಷ್ಮೀನರಸಿಂಹಗೌಡ, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಗೋಪಿನಾಥ್, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ವಲಯ ಅಧಿಕಾರಿ ಅರುಣ್ ಕುಮಾರ್, 108 ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -