ಎರಡು ಗಂಟೆಗಳಿಗೊಮ್ಮೆ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿರುವ ರೋಗಿಗಳು ರಕ್ತ, ಕಫ, ಪರೀಕ್ಷೆಗೆ ದಿನಗಟ್ಟಲೇ ಕಾಯಬೇಕಾಗಿರುವ ದುಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನಾಧ್ಯಂತ ಕಾಣಿಸಿಕೊಳ್ಳುತ್ತಿರುವ ಜ್ವರದ ಪ್ರಕರಣಗಳಿಂದಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ೬೦೦ ಮಂದಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಬರುವಂತಹ ಬಹುತೇಕ ರೋಗಿಗಳು ಜ್ವರಗಳಿಂದ ಬಳಲುತ್ತಿರುವುದರಿಂದ ಎಲ್ಲಾ ರೋಗಿಗಳಿಗೂ ರಕ್ತ ಪರೀಕ್ಷೆಯನ್ನು ಮಾಡಿಸಲಾಗುತ್ತಿದೆ. ರಕ್ತಪರೀಕ್ಷಾ ಕೇಂದ್ರದಲ್ಲಿ ರೋಗಿಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ರಕ್ತದ ಮಾದರಿಗಳನ್ನು ಪಡೆದುಕೊಂಡರೂ ಕೂಡಾ ರಕ್ತ ಪರೀಕ್ಷೆಯ ವರದಿಯನ್ನು ನೀಡಲು ಸಿಬ್ಬಂದಿ ಹೆಣಗಾಡಬೇಕಾಗಿದೆ.
ಪ್ರತಿ ಎರಡು ಗಂಟೆಗಳಿಗೊಮ್ಮೆ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಆಸ್ಪತ್ರೆಯಲ್ಲಿರುವ ಜನರೇಟರ್ ಕೂಡಾ ಪ್ರಯೋಜನವಿಲ್ಲದಂತಾಗಿದೆ, ಆಸ್ಪತ್ರೆಯಲ್ಲಿ ಒಂದೆಡೆ ನೀರಿನ ಸಮಸ್ಯೆಯಾದರೆ, ಮತ್ತೊಂದೆಡೆ ವಿದ್ಯುತ್ತಿನ ಸಮಸ್ಯೆ ಹೆಚ್ಚಾಗಿ ಕಾಡಲಾರಂಭಿಸಿದೆ.
ಇತ್ತಿಚೆಗೆ ಜನತೆಯಲ್ಲಿ ಭಯವನ್ನುಂಟು ಮಾಡುತ್ತಿರುವ ಡೆಂಗ್ಯೂ ಮತ್ತು ಚಿಕನ್ಗುನ್ಯಾ ಖಾಯಿಲೆಗಳಿಂದಾಗಿ ಜನರು ರಕ್ತ ಪರೀಕ್ಷೆಗಾಗಿ ಖಾಸಗಿ ಲ್ಯಾಬ್ಗಳಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿದೆ. ತೀರಾ ಬಡವರು, ಖಾಸಗಿ ಲ್ಯಾಬ್ಗಳಲ್ಲಿ ರಕ್ತಪರೀಕ್ಷೆಗಳನ್ನು ದುಬಾರಿ ಹಣವನ್ನು ನೀಡಿ, ರಕ್ತಪರೀಕ್ಷೆಗಳನ್ನು ಮಾಡಿಸಿಕೊಂಡು ಬರಲು ಸಾದ್ಯವಾಗದೆ ಆಸ್ಪತ್ರೆಯಲ್ಲೆ ದಿನಗಟ್ಟಲೇ ಕಾದು ಕುಳಿತುಕೊಳ್ಳಬೇಕಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕಾಗಿದೆ.
- Advertisement -
- Advertisement -
- Advertisement -
- Advertisement -