ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಅಧಿಕಾರ ಹಿಡಿದಿದ್ದರಿಂದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಗು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ಹತಾಶರಾಗಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗು ಕಾಂಗ್ರೆಸ್ ಪಕ್ಷದ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಹೇಳಿದರು.
ನಗರದಲ್ಲಿ ಗುರುವಾರ ಸುದ್ಧಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಕಳೆದ ನವೆಂಬರ್ ೩ ರಂದು ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಡಾ. ಧನಂಜಯರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ನಗರದ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ಹಂಚಿಕೆ ಮಾಡಲಾಗಿರುವ ಮನೆಗಳಲ್ಲಿ ತಾರತಮ್ಯ ಮಾಡಿದ್ದಾರೆ ಎಂದಿರುವುದು ಸತ್ಯಕ್ಕೆ ದೂರ ಎಂದರು.
ಬಡವರಿಗೆ ಮನೆಗಳನ್ನು ಹಂಚುವ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಿ ನಂತರ ಗ್ರಾಮ ಪಂಚಾಯತಿಯ ಆವರಣದಲ್ಲಿ ಗ್ರಾಮಸಭೆಯನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮಸಭೆಗೆ ಎಲ್ಲಾ ಜೆಡಿಎಸ್ ಸದಸ್ಯರು ಹಾಜರಿದ್ದು ಅವರ ಸಮ್ಮುಖದಲ್ಲಿಯೇ ಆಯ್ಕೆ ಮಾಡಲಾಗಿದೆ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಜೆಡಿಎಸ್ನ ತಾಲುಕು ಅಧ್ಯಕ್ಷ ಗ್ರಾಮಸಭೆಯಲ್ಲಿ ವಿನಾಕಾರಣ ರಗಳೆ ತೆಗೆದು ಹೊರನಡೆದು ಇದೀಗ ಇಂತಹ ಆರೋಪಕ್ಕೆ ಮುಂದಾಗಿದ್ದಾರೆ. ಗ್ರಾಮ ಸಭೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರೆಲ್ಲರೂ ಹಾಜರಾಗಿ ಸಭೆಯ ನಡಾವಳಿಗೆ ಸಹಿಗಳನ್ನು ಮಾಡಿರುತ್ತಾರೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗರಾಜಯ್ಯ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಈ ಹಿಂದೆ ಡಾ.ಧನಂಜಯರೆಡ್ಡಿ ಅವರ ಅಧಿಕಾರಾವಧಿಯಲ್ಲಿಯೂ ಅವರೇ ಕಾರ್ಯದರ್ಶಿಗಳಾಗಿದ್ದರು ಹಾಗೂ ಅವರನ್ನು ಅಲ್ಲಿಗೆ ಕರೆತಂದಿದ್ದು ಸಹ ಸ್ವತಃ ಅವರೇ ಎನ್ನುವುದನ್ನು ಅವರು ಮರೆತಂತಿದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಹಾಗು ಕಾರ್ಯಕರ್ತರು ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಶಾಸಕರ ಸಮ್ಮುಖದಲ್ಲಿಯೇ ಸೆದೆಬಡಿಯುತ್ತೇವೆ, ಮಟ್ಟಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದರೂ ಸಹ ಮೌನವಾಗಿದ್ದ ಶಾಸಕರು ಅವರಿಗೆ ಸಹಕರಿಸುತ್ತಿದ್ದುದು ಶೋಚನೀಯ ಎಂದರು.
ತಾಲ್ಲೂಕಿನಲ್ಲಿ ಆಡಳಿತದ ಯಂತ್ರ ಕುಸಿದಿದ್ದು, ಯಾವ ಅಧಿಕಾರಿಗಳೂ ಕೂಡಾ ಶಾಸಕರ ಮಾತಿಗೆ ಬೆಲೆ ನೀಡುತ್ತಿಲ್ಲವೆಂದು ಸ್ವತಃ ಹೇಳುವ ಶಾಸಕರು ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲಾಗದಿರುವುದು ಅವರ ಅಸಹಾಯಕತೆಯನ್ನು ತೋರಿಸುತ್ತದೆ. ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂಬ ನೆಪವೊಡ್ಡಿ ಜನರನ್ನು ಹುರಿದುಂಬಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿಸುವ ಬದಲಿಗೆ ಅಧಿಕಾರಿಗಳಿಂದ ಕೆಲಸ ಮಾಡಿಸಲು ತನ್ನಿಂದಾಗುವುದಿಲ್ಲ ಎಂದು ಒಪ್ಪಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಶಾಸಕರಾಗಿರುವ ಬದಲಿಗೆ ಶಾಸಕ ಸ್ಥಾನಕ್ಕೆ ಅವರೇ ರಾಜೀನಾಮೆ ನೀಡಲಿ ಎಂದರು.
ಡಾ.ಧನಂಜಯರೆಡ್ಡಿಯವರು ಬಡವರ ಪರವಾಗಿದ್ದರೆ ಅವರದೇ ಪಕ್ಷದ ಶಾಸಕರ ಬಳಿ ಹೋಗಿ ಇನ್ನಷ್ಟು ಮನೆಗಳನ್ನು ಪಂಚಾಯತಿಗೆ ಹಾಕಿಸಿಕೊಂಡು ಬಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಇನ್ನಷ್ಟು ಬಡವರಿಗೆ ನೀಡಲಿ. ಅದು ಬಿಟ್ಟು ಇನ್ನೊಬ್ಬರು ಮಾಡುವ ಒಳ್ಳೆಯ ಕೆಲಸಕ್ಕೆ ಅಡ್ಡಿಯುಂಟುಮಾಡುವುದು ಅವರಿಗೆ ತರವಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಎಂಪಿಸಿಎಸ್ ಅಧ್ಯಕ್ಷ ಡಿ.ಪಿ.ನಾಗರಾಜ್, ಸದಸ್ಯರಾದ ಶ್ರೀರಂಗಪ್ಪ, ದೊಡ್ಡನರಸಿಂಹಪ್ಪ, ಪ್ರಸನ್ನ, ಮಾಜಿ ಸದಸ್ಯ ನರಸಿಂಹರೆಡ್ಡಿ, ಗೋಪಾಲಕೃಷ್ಣ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -