ರೈತ ಆಸಕ್ತ ಗುಂಪುಗಳು ಗ್ರಾಮಗಳನ್ನು ಮಾದರಿಯನ್ನಾಗಿ ಮಾಡಬಹುದು. ತಮ್ಮ ಅಭಿವೃದ್ಧಿಗಾಗಿ ತಾವುಗಳೇ ಒಗ್ಗೂಡುವ ಈ ಯೋಜನೆಯಲ್ಲಿ ರೈತರು ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬೇಕು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ ತಿಳಿಸಿದರು.
ತಾಲ್ಲೂಕಿನ ಬಸವಾಪಟ್ಟಣದಲ್ಲಿ ಸೋಮವಾರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಹೊಸದಾಗಿ ಪ್ರಾರಂಭಿಸಿದ ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರದೋ ನೆರವು ನಮ್ಮೆಡೆಗೆ ಬರುತ್ತದೆ ಎಂದು ಕಾಯುವುದರ ಬದಲು ನಮ್ಮ ಶಕ್ತಿ, ಸಾಮರ್ಥ್ಯ, ನಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆಯನ್ನು ಕಂಡುಕೊಂಡು ಅಭಿವೃದ್ಧಿಯತ್ತ ಮುನ್ನಡೆಯೋಣ. ಈ ನಿಟ್ಟಿನಲ್ಲಿ ಪ್ರತಿಯೊಂದು ರೈತ ಆಸಕ್ತ ಗುಂಪುಗಳು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿ, ನಮ್ಮ ಪೂರ್ವಜರು ರೂಢಿಸಿಕೊಂಡಿದ್ದ ಪದ್ಧತಿಗಳನ್ನು ಕೈ ಬಿಟ್ಟು ಪರಿಸರ ಹಾಳಾಗಲು ಕಾರಣರಾಗಿದ್ದೇವೆ. ಪ್ರತಿಯೊಬ್ಬರೂ ಗಿಡನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಕೆರೆ, ಕುಂಟೆ, ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸಬೇಕು. ಅರಳಿ ಮರವೊಂದು ಹಳ್ಳಿಯಲ್ಲಿದ್ದರೆ ಆಮ್ಲಜನಕದ ಕಾರ್ಖಾನೆಯಿದ್ದಂತೆ. ಅರಳಿ ಮರವೊಂದು ಗಂಟೆಗೆ 2,252 ಕಿಲೋ ಇಂಗಾಲದ ಡಯಾಕ್ಸೈಡ್ ಹೀರಿಕೊಂಡು 1,712 ಕಿಲೋ ಆಮ್ಲಜನಕ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯು ರೈತರಿಂದ ರೈತರಿಗಾಗಿ ರೈತರೇ ಸ್ಥಾಪಿಸಿರುವ ಸಂಸ್ಥೆ. ರೈತರ ಅನುಕೂಲಕ್ಕಾಗಿ ಕಂಪನಿಯು ತೆರೆದಿರುವ ಮಾರಾಟ ಮಳಿಗೆಯಿಂದ ತಮಗೆ ಬೇಕಾದ ಪೇಪರ್, ಫಾರ್ಮಲಿನ್ ಮುಂತಾದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದರು.
ಮೈರಾಡ ಸಂಸ್ಥೆಯು ರೇಷ್ಮೆ ರೈತ ಆಸಕ್ತ ಗುಂಪುಗಳ ಮೂಲಕ ರೇಷ್ಮೆ ಬೆಳೆಗಾರರನ್ನು ಒಗ್ಗೂಡಿಸಿ ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಶಕ್ತಿ ಪಡೆಯುವಂತೆ ಮಾಡಲು ಶ್ರಮಿಸುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿ.ಇ.ಒ ಕೆ.ಎನ್.ಜನಾರ್ಧನ ಮೂರ್ತಿ ಮಾತನಾಡಿ, ಈ ದಿನ ನಾವು ವಿತರಿಸುತ್ತಿರುವ ಗಿಡಗಳ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸುಂದರಗೊಳಿಸಲು ತಮ್ಮ ಹಸಿರು ಕಾಣಿಕೆಯನ್ನು ಗಿಡಗಳನ್ನು ಬೆಳೆಸುವ ಮೂಲಕ ನೀಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕರಿಬೇವು, ಬಾದಾಮಿ, ಸಿಲ್ವರ್ ಓಕ್, ಹೊಂಗೆ, ಗುಲ್‌ಮೊಹರ್, ಬೆಟ್ಟದ ನೆಲ್ಲಿ ಮುಂತಾದ ಜಾತಿಗಳ 100 ಗಿಡಗಳನ್ನು ರೈತರಿಗೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮುನಿಯಪ್ಪ ಅವರ ಸಹಕಾರದಿಂದ ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ದೇವರಮಳ್ಳೂರು ಕೆರೆಯಲ್ಲಿ ಆನಂದನ್ ಕೋಕಾಕೋಲ ಫೌಂಡೇಶನ್ ಆರ್ಥಿಕ ನೆರವಿನೊಂದಿಗೆ ಮೈರಾಡಾ ಸಂಸ್ಥೆ ನೇತೃತ್ವದಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಪ್ರಕಾಶ್, ಎಂಜಿನಿಯರ್ ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -