ಗಾಂಧಿಜಯಂತಿಯ ಪ್ರಯುಕ್ತ ಬುಧವಾರ ಸುಮಾರು ನಾನ್ನೂರು ವರ್ಷಗಳಿಗೂ ಹಳೆಯದಾದ ನಗರದ ಅಗ್ರಹಾರ ಬೀದಿಯಲ್ಲಿರುವ ಶಾಮಣ್ಣಬಾವಿಯ ಸ್ವಚ್ಛತೆಯ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಹಾಗೂ ನಗರಸಭೆಯ ಪೌರಕಾರ್ಮಿಕರು ಕೈಗೊಂಡರು.
ಸ್ವಚ್ಛತೆಯ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಶಾಸಕ ವಿ.ಮುನಿಯಪ್ಪ ಶಾಮಣ್ಣ ಬಾವಿಯ ಬಳಿ ಗಿಡವನ್ನು ನೆಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವವರು ಸುಮಾರು ೪೦೦ ವರ್ಷಕ್ಕೂ ಹಿಂದೆ ಈ ಕಲ್ಯಾಣಿ ನಿರ್ಮಿಸಿದ್ದರು. ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಸದಾ ಶುದ್ಧವಾದ ನೀರಿರುತ್ತಿತ್ತು. ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ. ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಅಂದರೆ, ವಿಷ್ಣು ಮತ್ತು ಶಿವ ಒಂದೇ ಕಡೆ ಇಲ್ಲಿದ್ದಾರೆ. ಇವರೊಂದಿಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿದ್ದಾರೆ. ಶಾಮಣ್ಣ ಬಾವಿಯ ಸುತ್ತ ಅರಳಿ ಮರಗಳು, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು ಅತ್ಯಂತ ಪ್ರಶಾಂತವಾದ ಸುಂದರ ತಾಣವಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಎಲ್ಲಾ ಯುವಕರಿಗೆ ಈಜು ಕೊಳವಾಗಿತ್ತು. ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದಾಗ ಮಳೆ ನೀರು ನಿಲ್ಲುತ್ತದೆ, ಅಂತರ್ಜಲ ವೃದ್ಧಿಸುತ್ತದೆ. ಸ್ವಚ್ಛತೆ ಕಾರ್ಯಕ್ಕೆ ಸ್ವಯಂಸೇವಕರಾಗಿ ಆಗಮಿಸಿರುವ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಕ್ಕೆ ಅಭಿನಂದನೆಗಳು” ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ೪೫ ಮಂದಿ ವಿದ್ಯಾರ್ಥಿಗಳು ಪೌರಕಾರ್ಮಿಕರ ಜೊತೆಗೂಡಿ ಶಾಮಣ್ಣಬಾವಿಯಲ್ಲಿ ಬೆಳೆದಿದ್ದ ಗಿಡಗಂಟೆಗಳು, ಕಳೆಗಿಡಗಳು ಹಾಗೂ ತ್ಯಾಜ್ಯವನ್ನು ಹೊರಕ್ಕೆ ಹಾಕಿದರು.
ತಹಶೀಲ್ದಾರ್ ಎಂ.ದಯಾನಂದ್, ಪೌರಾಯುಕ್ತ ಶ್ರೀಕಾಂತ್, ನಗರಸಭೆ ಸದಸ್ಯರಾದ ಮಂಜುನಾಥ್, ಅನಿಲ್ ಕುಮಾರ್, ಮಂಜುನಾಥ್, ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಪ್ರಕಾಶ್, ಪ್ರೊ.ಮುರಳಿ ಆನಂದ್, ಪ್ರೊ.ರಾಮಚಂದ್ರರೆಡ್ಡಿ, ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -







