ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕಿರುವುದರಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಯವರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದ ಬಗ್ಗೆ ರೂಪುರೇಷೆಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಡಿ.ವೈ.ಎಸ್.ಪಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾನುವಾರ, ಜೂನ್ 21ರಂದು ಮುಖ್ಯಮಂತ್ರಿಗಳ ಮನೆಯ ಮುಂದೆ ನಡೆಸಲು ಉದ್ದೇಶಿಸಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿಯವರ ಧರಣಿಯ ಕುರಿತಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿ ನಡೆದ ನೀರಾವರಿ ಹೋರಾಟದಲ್ಲಿ ಬೆಂಗಳುರಿನ ಮೇಕ್ರಿ ಸರ್ಕಲ್ ಬಳಿ ಕೆಲ ಬಸ್ಗಳು ಜಖಂಗೊಂಡು, ಸಂಚಾರ ಅಸ್ತವ್ಯಸ್ತಗೊಂಡು ನಾಗರಿಕರಿಗೆ ಅಪಾರ ತೊಂದರೆಯುಂಟಾಗಿತ್ತು. ಇದು ಮರುಕಳಿಸಬಾರದು. ಪೊಲೀಸ್ ಇಲಾಖೆ ರೈತವಿರೋಧಿಯಲ್ಲ. ಆದರೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿರುವುದರಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಯವರು ಸಹಕರಿಸಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರ ಶಾಶ್ವತ ನೀರಾವರಿ ಯೋಜನೆ ಕುರಿತಂತೆ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದು, ಆ ಬಗ್ಗೆ ಸಾಕಷ್ಟು ಅಸಮಧಾನಗಳಿವೆ. ಸ್ಥಳೀಯ ತಜ್ಞರು ಹಾಗೂ ಎಂಜಿನಿಯರುಗಳನ್ನು ಸಮಿತಿಯಲ್ಲಿ ಸೇರಿಸಿಕೊಂಡಿಲ್ಲ. ಈ ಬಗ್ಗೆ ನಾಳೆ ವಿಕಾಸಸೌಧದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಿದ್ದು, ಆ ಸಭೆಯ ನಂತರ ಧರಣಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರಾಮಕೃಷ್ಣಪ್ಪ, ನಂಜಪ್ಪ, ನಾರಾಯಣಸ್ವಾಮಿ, ರವಿಕುಮಾರ್, ಪುರುಷೋತ್ತಮ್, ಪ್ರತೀಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -