ಶ್ರದ್ಧಾಭಕ್ತಿಯ ಸಂಕೇತವಾದ ರಂಜಾನ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಬುಧವಾರ ಸಂಭ್ರಮದಿಂದ ತಾಲ್ಲೂಕಿನಾದ್ಯಂತ ಆಚರಿಸಿದರು. ಒಂದು ತಿಂಗಳ ಕಾಲ ಕೈಗೊಂಡ ರೋಜಾ (ಉಪವಾಸ ಆಚರಣೆ) ಕೊನೆಗೊಳಿಸಿ ಬುಧವಾರ ರಂಜಾನ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ನಂತರ ನಿಧನ ಹೊಂದಿದ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.
ಪವಿತ್ರ ರಂಜಾನ್ ಮಾಸವನ್ನು ಧಾರ್ಮಿಕ ತಿಂಗಳು. ಉಪವಾಸದ ತಿಂಗಳೆಂದೇ ಕರೆಯುತ್ತಾರೆ. ರಂಜಾನ್ ಹಬ್ಬಕ್ಕೂ ಒಂದು ತಿಂಗಳು ಮುನ್ನ ಅವರು ಕೈಗೊಳ್ಳುವ ರೋಜಾ ಆಚರಣೆಯಲ್ಲಿ ಹಿರಿಯರು ಮತ್ತು ಕಿರಿಯರು ಬೇಧವಿಲ್ಲದೆ ಪಾಲ್ಗೊಂಡು ತಿಂಗಳು ಪೂರ್ತಿ ಕುರಾನ್ ಪಠಿಸುತ್ತಾರೆ. ಎಲ್ಲರ ಸುಖ-ಸಂತೋಷ- ನೆಮ್ಮದಿಗಾಗಿ ಅಲ್ಲಾಹುವಿನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು, ದಾನ ನೀಡುತ್ತಾರೆ.
“ರಂಜಾನ್ ಉಪವಾಸ, ಮುಸ್ಲಿಮನೆನಿಸಿಕೊಳ್ಳಬೇಕಾದರೆ ಪಾಲಿಸಬೇಕಾದ ಐದು ಕರ್ತವ್ಯಗಳಲ್ಲಿ ಒಂದು. ಉಪವಾಸವನ್ನು ಅರಬಿಕ್ ಭಾಷೆಯಲ್ಲಿ “ಸೌಮ್” ಎಂದರೆ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ “ರೋಜಾ” ಎಂದು ಕರೆಯಲಾಗುತ್ತದೆ. ಇಸ್ಲಾಮ್ ಧರ್ಮದ ಅನುಯಾಯಿಗಳು ಕಡ್ಡಾಯವಾಗಿ ವರ್ಷದ ಒಂಭತ್ತನೆಯ ತಿಂಗಳಾದ ರಂಜಾನ್ ತಿಂಗಳು ಪೂರ್ತಿ ಹಗಲು ಉಪವಾಸವನ್ನು ಆಚರಿಸಬೇಕಾಗುತ್ತದೆ. ಈ ತಿಂಗಳಿನಲ್ಲಿ ಉಪವಾಸ, ದಾನ ಧರ್ಮ ಮಾಡುವುದರಿಂದ ಅರಿಶಡ್ವರ್ಗಗಳೇ ಮುಂತಾದ ಆಂತರ್ಯದ ಕಲ್ಮಶಗಳನ್ನು ಸುಟ್ಟು ಹೃದಯವನ್ನು ಪವಿತ್ರಗೊಳಿಸುತ್ತದೆ.
ಈ ಆಚರಣೆಯನ್ನು ನಿಯಮ, ಶಿಸ್ತುಗಳಿಗೆ ಬದ್ಧವಾಗಿಸಿ ಸರಳವಾಗಿ ಆಚರಿಸುವಂತೆ ಮುಸ್ಲಿಮರಿಗೆ ಪ್ರವಾದಿಯವರು ಕಡ್ಡಾಯಗೊಳಿಸಿದರು. ದಾನವನ್ನು ಕೂಡ ಉಳ್ಳವರು ಕ್ರಮಬದ್ಧವಾಗಿ ಮತ್ತು ನಿಯಮಬದ್ಧವಾಗಿ, ಬಡಬಗ್ಗರಿಗೆ ಇಂತಿಷ್ಟು ಪಾಲು ತಮ್ಮ ಧನಕನಕಗಳಿಂದ ನೀಡಬೇಕೆಂದು ನಿಯಮವನ್ನು ರೂಢಿಯನ್ನು ತಂದರು” ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಬೋಧನೆ ಮಾಡಿದ ಧರ್ಮಗುರುಗಳು ತಿಳಿಸಿದರು.